

ಹಿರೇಕೆರೂರ: ಸತಿ ಪತಿ ಸಾವಿನಲ್ಲೂ ಒಂದಾದ ಘಟನೆ ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ನಾಗಪ್ಪ ಚನ್ನಬಸಪ್ಪ ಮುದಿಗೌಡ್ರ (82) ಹಾಗೂ ಅವರ ಪತ್ನಿ ಚನ್ನಬಸಮ್ಮ (77) ಮೃತಪಟ್ಟ ದಂಪತಿ.
ಚನ್ನಬಸಮ್ಮ ಗ್ರಾಮದ ತಮ್ಮ ಮನೆಯಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಸಂಜೆ 4 ಗಂಟೆಗೆ ನೆರವೇರಿಸಲಾಗಿದೆ. ಇನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿ ನಾಗಪ್ಪ ಅವರಿಗೆ ಪತ್ನಿ ಸಾವಿನ ಬಗ್ಗೆ ಗೊತ್ತಾಗಿಲ್ಲ. ಇವರು ಸಂಜೆ 5 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತ್ನಿ ಚನ್ನಬಸಮ್ಮನವರನ್ನು ಮಣ್ಣು ಮಾಡಿದ ಜಾಗದ ಪಕ್ಕದಲ್ಲಿ ನಾಗಪ್ಪನವರ ಶವವನ್ನು ಮಣ್ಣು ಮಾಡಲಾಗಿದೆ. ಮೃತರಿಗೆ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.