ಒಂದೇ ಆಸ್ತಿಗೆ 2 ಕಡೆ ಸಾಲ ಪಡೆದು ವಂಚಿಸಿದ ದಂಪತಿ

bank of baroda
Published on

ಮೈಸೂರು: ಒಂದೇ ಆಸ್ತಿಯನ್ನು ಎರಡು ಬ್ಯಾಂಕ್‌ಗಳಲ್ಲಿ ಅಡಮಾನವಿಟ್ಟು ವಂಚನೆ ಮಾಡಿರುವ ದಂಪತಿ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೈಸೂರಿನ ಜೆ.ಪಿ.ನಗರ ನಿವಾಸಿಯಾದ ಎಂ.ಪಿ.ನಿರಂಜನ್ ಹಾಗೂ ಎಚ್.ಎಸ್.ನಂದಿನಿ ಆರೋಪಿಗಳು.


ಆಸ್ತಿಯ ಮೂಲ ದಾಖಲಾತಿಗಳನ್ನು ಬ್ಯಾಂಕ್ ಆಫ್ ಬರೋಡಾ ಸರಸ್ವತಿಪುರಂ ಶಾಖೆಯಲ್ಲಿ ಅಡಮಾನವಿಟ್ಟು 2016ರಲ್ಲಿ 49.99 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ. ಸಾಲ ಪಡೆದು 8 ವರ್ಷವಾದರೂ ಹಣ ಮರುಪಾವತಿಸಿಲ್ಲ. ಸಾಲದ ಹಣ ಬಡ್ಡಿ ಸೇರಿ 79,71,306 ರೂ. ಪಾವತಿಸಬೇಕಿತ್ತು.

ಈ ಮಧ್ಯೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ ಸುರಭಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲೂ ಸಹ ಇದೇ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಸಾಲ ಪಡೆದಿದ್ದಾರೆ. ಈ ಬಗ್ಗೆ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನವರೂ ಸಹ ಪತ್ರ ವ್ಯವಹಾರ ಮಾಡಿ ದಂಪತಿಯ ವಂಚನೆಯನ್ನು ಬಯಲಿಗೆ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಸರಸ್ವತಿಪುರಂ ಶಾಖೆಯ ಪ್ರಬಂಧಕ ಎಂ.ಯೋಗೇಶ್ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಅನ್ವಯ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net