

ಗೋಕರ್ಣ: ದೇಶವನ್ನು ಬಲಿಷ್ಠಗೊಳಿಸಬೇಕಾದರೆ ನಮ್ಮ ಸಂಘಟನೆ ಮೊದಲು ಬಲಗೊಳ್ಳಬೇಕು. ನಾವು ಹೆಚ್ಚು ಹೆಚ್ಚು ಸಂಘಟಿತರಾದಂತೆ ಸಂಘಟನೆಯೂ ಭದ್ರಗೊಳ್ಳುತ್ತದೆ. ಸಂಘಟನೆಯೇ ದೇಶದ ಶಕ್ತಿ ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಸೋಮವಾರ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರದಲ್ಲಿ ಆಯೋಜಿಸಲಾದ ಸಂಘಟನಾ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಶ್ರೀವ್ಯಾಸಪೀಠದಿಂದ ದಿವ್ಯ ಸಂದೇಶ ದಯಪಾಲಿಸಿ ಶ್ರೀಗಳು ಆಶೀರ್ವಚನವಿತ್ತರು.
ಪ್ರತಿ ಮನೆಯಿಂದ ಕನಿಷ್ಠ ಒಬ್ಬರಂತೆ ಕಾರ್ಯಕರ್ತರು ಸಂಘಟನೆಯನ್ನು ಸೇರಿಕೊಳ್ಳಬೇಕು. ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರೂ ಒಂದೊಂದು ಕಾಯಕದ ಹೊಣೆ ಹೊತ್ತ ಸೇವಕರು. ಪ್ರತಿ ಕಾಯಕಕ್ಕೂ ಸೇವಕರು ಇರಬೇಕು ಇದೇ ಸಂಘಟನಾ ಚಾತುರ್ಮಾಸ್ಯದ ಮೂಲ ತತ್ವ. ಈ ಮೂಲಕ ಸಂಘಟನೆಯಲ್ಲಿರುವ ಸೇವಕರು ಮತ್ತು ಸಮಾಜದ ಮಧ್ಯೆ ಅದ್ವೈತ ಸಾಧಿತವಾಗಬೇಕು ಎಂದು ಶ್ರೀಗಳು ಸೂಚಿಸಿದರು.
ಧರ್ಮಸಭೆಯಲ್ಲಿ 30 ಸಂಸ್ಕೃತ ಮತ್ತು 11 ಕನ್ನಡ ಕೃತಿರತ್ನಗಳನ್ನು ಸಾರಸ್ವತ ಪ್ರಪಂಚಕ್ಕೆ ನೀಡಿದ ಕವಿ ಬಂದಗದ್ದೆ ನಾಗರಾಜ ಅವರು ರಚಿಸಿದ ಶ್ರೀಮದಾತ್ಮಲಿಂಗ ವೈಭವಮ್ ಷಟ್ಪದಿ ಕಾವ್ಯವನ್ನು ಲೋಕಾರ್ಪಣೆ ಮಾಡಿದರು. ಪಾದೆಕಲ್ಲು ವಿಷ್ಣು ಭಟ್ಟ ಕೃತಿ ಪರಿಚಯಿಸಿದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ಡಿ.ಡಿ. ಶರ್ಮಾ ಅತಿಥಿಗಳಾಗಿ ಪಾಲ್ಗೊಂಡರು.