ಆರೋಗ್ಯವಂತ ಪ್ರಜೆಗಳಿದ್ದರೆ ಮಾತ್ರ ದೇಶ ಸದೃಢ

22 ckm 5
ಚಿಕ್ಕಮಗಳೂರು ಉಪ್ಪಳ್ಳಿಯ ಮಾಡೆಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ದೈಹಿಕ ಶಿಕ್ಷಕ ನಿರಂಜನ್ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ಮಾಡಿಸಿದರು.
Published on

ಚಿಕ್ಕಮಗಳೂರು: ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾದ ಪ್ರಜೆಗಳಿಂದ ಕೂಡಿದ ನಾಡು ಸಮರ್ಥ ಹಾಗೂ ಸಾಮರಸ್ಯ ಹೊಂದಿರಲು ಸಾಧ್ಯ ಎಂದು ಮಾಡೆಲ್ ಶಾಲಾ ಸಂಸ್ಥಾಪಕ ಹಾಗೂ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ. ಎಂ.ಎನ್.ಷಡಕ್ಷರಿ ತಿಳಿಸಿದರು.

ನಗರದ ಉಪ್ಪಳ್ಳಿಯ ಮಾಡೆಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನವನ್ನು ಯೋಗ ಘಂಟಾನಾದವನ್ನು ಬಾರಿಸುವುದರ ಮೂಲಕ ಉದ್ಘಾಟಿಸಿ ಯೋಗ ತಾಲೀಮಿನ ಬಳಿಕ ಮಾತನಾಡಿದ ಅವರು, ಪುರಾತನ ಕಾಲದಿಂದ ಋಷಿ ಮುನಿಗಳು ಯೋಗಾಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಯೋಗದಿಂದ ನಮ್ಮ ಜೀವನದಲ್ಲಾಗುವ ಗುಣಾತ್ಮಕ ಆಂಶಗಳನ್ನು ಅರಿತುಕೊಂಡು ನಿತ್ಯ ಧ್ಯಾನ ಮತ್ತು ಯೋಗಾಭ್ಯಾಸವನ್ನು ಆಳವಡಿಸಿಕೊಂಡಲ್ಲಿ, ಸಮಾಜದ ಏಳಿಗೆಗೆ ಪೂರಕವಾಗುವ ಪ್ರಜೆಗಳಾಗಬಹುದು ಎಂದರು.
ಆಧುನೀಕರಣದ ಭರದಲ್ಲಿ ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಿದ್ದ ಆಚಾರ ವಿಚಾರಗಳು ಹಾಗೂ ಆಹಾರ ಪದ್ದತಿ ಬದಲಾಗಿವೆ, ಇದರಿಂದ ಹೊಸ ಸಮಸ್ಯೆಗಳಾದ ಖಿನ್ನತೆ, ಬೊಜ್ಜು, ಉಸಿರಾಟದ ತೊಂದರೆ ಮತ್ತಿತರ ಸಾಮಾಜಿಕ ಹಾಗೂ ದೈಹಿಕ ಮಟ್ಟ ಕ್ಷೀಣಿಸುತ್ತಿರುವುದು ದುಃಖದ ಸಂಗತಿ. ದಿನಕ್ಕೆ ಕನಿಷ್ಠ ಅರ್ಧಗಂಟೆ ಯೋಗ ಮಾಡುವುದರಿಂದ ಪ್ರತಿಯೊಬ್ಬರೂ ಲವಲವಿಕೆಯಿಂದಿರುವುದರ ಜೊತೆಗೆ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಎಂದು ಹೇಳಿದರು.
ವಿಶ್ವ ಯೋಗ ದಿನದ ಉಸ್ತುವಾರಿ ದೈಹಿಕ ಶಿಕ್ಷಕ ನಿರಂಜನ್ ಮಾತನಾಡಿ, ೧೨೭ ರಾಷ್ಟಗಳು ಇಂದು ಯೋಗ ದಿನವನ್ನು ಆಚರಿಸುತ್ತಿವೆ. ಪ್ರತಿಯೊಬ್ಬರು ಯೋಗ ಮಾಡುವುದನ್ನು ರೂಢಿಗತ ಮಾಡಿಕೊಳ್ಳವುದರಿಂದ ಉತ್ತಮ ಆರೋಗ್ಯ ಪಡೆಯಬಹುದು. ತಾಡಾಸನ, ವೃಕ್ಷಾಸನ, ಹಸ್ತಪಾದಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ದಂಡಾಸನ, ಭದ್ರಾಸನ, ವಜ್ರಾಸನ, ಮಂಡುಕಾಸನ, ಮಕರಾಸನ, ಭುಜಂಗಾಸನ, ಸೇತು ಬಂಧಾಸನ, ಪವನ ಮುಕ್ತಾಸನ ಮುಂತಾದ ಅಸನಗಳನ್ನು ಪ್ರಾತ್ಯಕ್ಷತೆಯೊಂದಿಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಶಾಲೆಯ ಮುಖ್ಯ ಶಿಕ್ಷಕ ಯೋಗೀಶ್ ಮತ್ತು ಶಿಕ್ಷಕ ವೃಂಧದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net