

ಮೈಸೂರು; ರಂಗಭೂಮಿ ಕಲೆಯಿಂದ ಸಮಾಜ ಕಟ್ಟುವ ಕೆಲಸ ಆಗಬೇಕು ಎಂದು ರಂಗಭೂಮಿ ಕಲಾವಿದ, ಚಿತ್ರನಟ ಬಿ.ಸುರೇಶ್ ಹೇಳಿದರು.
ರಂಗಾಯಣ ಮತ್ತು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಹಯೋಗದಲ್ಲಿ ನಗರದ ಭೂಮಿಗೀತ ರಂಗವೇದಿಕೆಯಲ್ಲಿ ಆಯೋಜಿಸಿದ್ದ ಮೈಸೂರು ಸಂಕ್ರಾಂತಿ ರಂಗಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಿನ ದುರಿತ ಕಾಲದಲ್ಲೇ ‘ದೇಶ’ ಎಂದರೆ ದೇವಸ್ಥಾನವಾಗಿದೆ. ಆದರೆ, ಅದಲ್ಲ. ದೇಶ ಎಂದರೆ ಜನರು ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ಈ ಕೆಲಸ ರಂಗಭೂಮಿಯಿಂದ ಆಗಬೇಕು. ಪ್ರತಿ ವ್ಯಕ್ತಿ ಕೈ ಕೈ ಹಿಡಿದು ಒಂದಾಗಿ ಸಾಗಬೇಕು. ಮಾನವೀಯತೆಯಿಂದ ಬದುಕಬೇಕು. ಇದುವೇ ಧರ್ಮ. ಸೌಹಾರ್ದತೆ, ಸಮಾನತೆ, ಸ್ವಾತಂತ್ರೃ ಜೀವನವನ್ನು ಕಟ್ಟಿಕೊಳ್ಳಬೇಕು. ಈ ರೀತಿ ಮಾನವಪರ ಸಮಾಜವನ್ನು ರಂಗಭೂಮಿಯಿಂದ ಉದಯಿಸಬೇಕು ಎಂದರು.
ರಂಗಭೂಮಿಯ ಚಟುವಟಿಕೆಗಳು ಚೇತೋಹಾರಿ. ಈ ಕ್ಷೇತ್ರಕ್ಕೆ ದೊಡ್ಡ ಸಾಮಾಜಿಕ ಜವಾಬ್ದಾರಿ ಇದೆ. ‘ಅಂಧಕಾರ ಮತ್ತು ಕೇಡಿನ ಕಾಲದಲ್ಲಿ ಅದೇ ರೀತಿಯ ನಾಟಕವನ್ನು ಮಾಡುವ ಮೂಲಕ ಜನಸಮುದಾಯವನ್ನು ಬಡಿದೆಬ್ಬಿಸಬೇಕು’ ಎಂದು ಕಲಾವಿದ ಜಾನ್ ಬ್ರೇಟ್ ಹೇಳಿದ್ದರು. ಈಗಲೂ ಕಾಲಕ್ಕೆ ತಕ್ಕಂತೆ ನಾಟಕ ರಚನೆ ಮಾಡುವ ಮೂಲಕ ಅರಿವಿನ ಜ್ಯೋತಿಯನ್ನು ಮೂಡಿಸಬೇಕು ಎಂದರು.
ಮೈಸೂರು ರಂಗಾಯಣದ ನಿರ್ದೇಶಕ ಸ್ಥಾನ ಖಾಲಿ ಇದೆ. ಹೀಗಾಗಿ, ಹೊಸ ನಿರ್ದೇಶಕರನ್ನು ನಿಯೋಜಿಸಬೇಕು. ಈ ಮೂಲಕ ಹೊಸ ರಂಗಪ್ರಯೋಗಕ್ಕೆ ಇದು ಸಜ್ಜಾಗಬೇಕು. ರಂಗಾಯಣದ ಸಂಸ್ಥೆಯಿಂದ ವೃತ್ತಿರಂಗಭೂಮಿ ಪ್ರಯೋಗ ನಡೆಯಬೇಕು. ಇದಕ್ಕೆ ತಕ್ಕಂತೆ ಹವ್ಯಾಸಿರಂಗ ತಂಡಗಳು ಬಲಿಷ್ಠವಾಗಬೇಕು. ಈ ರೀತಿ ಸಂಘಟಿತ ರಂಗ ಚಟುವಟಿಕೆ ನಡೆಯುವ ಊರು, ನಾಡು ಆರೋಗ್ಯಪೂರ್ಣವಾಗಲಿದೆ ಎಂದರು.
ಹವ್ಯಾಸಿ ರಂಗ ತಂಡದ ನಾಟಕವನ್ನು ಇನ್ನೊಂದು ಹವ್ಯಾಸಿ ರಂಗ ತಂಡ ನೋಡಲ್ಲ. ಬದಲಿಗೆ ‘ಅವರೇನು ಮಾಡಿದ್ದಾರೆ’ ಎಂದು ಲೇವಡಿ ಮಾಡುತ್ತಾರೆ. ಆದರೆ, ಎದುರಿಗೆ ಸಿಕ್ಕಾಗ ಬಹಳ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಇಂತಹ ಕಾಲದಲ್ಲಿ ರಂಗಾಯಣದಂತಹ ವೃತ್ತಿಪರ ಸಂಸ್ಥೆಯು ಹವ್ಯಾಸಿ ರಂಗ ತಂಡದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಈ ಪ್ರಕ್ರಿಯೆ ರಂಗಾಯಣದಲ್ಲಿ ನೋಡಲು ದೊರೆಯುತ್ತಿದೆ. ಇದೇ ರೀತಿ ರಂಗಚಟುವಟಿಕೆಗಳು ಹೀಗೆ ಮುಂದುವರಿಯಲಿ ಎಂದು ಹೇಳಿದರು.
ಮೈಸೂರಿಗೆ ರಂಗಭೂಮಿಯ ಗುಣವಿದೆ. ರಂಗಪ್ರಯೋಗಕ್ಕೆ ಸಜ್ಜುಗೊಳಿಸುವ, ಆ ಪ್ರಯೋಗವನ್ನು ಸ್ವೀಕರಿಸಿ ಪ್ರೋತ್ಸಾಹ ಗುಣ ಈ ನಗರಕ್ಕೆ ಇದೆ. ಮರ-ಗಿಡಗಳಿಗೆ ನೀರು-ಗೊಬ್ಬರ ಉಣಿಸುವಂತೆ ನಾಟಕ ಕಲೆಗೂ ಈ ಊರು ಉತ್ತೇಜನ ನೀಡುವ ಮೂಲಕ ಅಭಿವೃದ್ಧಿ ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ಎಚ್.ಎಸ್.ಸುರೇಶ್‌ಬಾಬು ಇನ್ನಿತರರಿದ್ದರು. ಕೆ.ವಿ.ಸುಬ್ಬಣ್ಣ ರಚನೆಯ ಮಂಜುನಾಥ ಬಡಿಗೇರ ನಿರ್ದೇಶನದ ಸೂಳೆ ಸನ್ಯಾಸಿ ನಾಟಕವನ್ನು ಅಭಿಯಂತರರು ತಂಡದ ಕಲಾವಿದರು ಪ್ರಸ್ತುತಪಡಿಸಿದರು.