ಹಳ್ಳಿಹಕ್ಕಿ ರಣಹದ್ದು ಅಲ್ಲ; ಇದು ಅಪ್ಪಟ ಹಳ್ಳಿಹಕ್ಕಿಯೇ

mysore
Published on

ಮೈಸೂರು: ಹಳ್ಳಿಹಕ್ಕಿ(ಎಚ್.ವಿಶ್ವನಾಥ) ಹದ್ದು ಅಥವಾ ರಣಹದ್ದು ಅಲ್ಲ. ಇದು ಅಪ್ಪಟ ಹಳ್ಳಿಹಕ್ಕಿಯೇ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.


ತಾರಾ ಪ್ರಕಾಶನ, ಶಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಆಯೋಜಿಸಿದ್ದ ಡಾ.ಎನ್.ವಾಸಯ್ಯ ಅವರ ‘ಹಳ್ಳಿಹಕ್ಕಿ ಅಡಗೂರು ವಿಶ್ವನಾಥ್ ಅವರ ಸಾಹಿತ್ಯ ಮತ್ತು ರಾಜಕಾರಣ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಹಳ್ಳಿಹಕ್ಕಿ ಎಂಬುದಕ್ಕೆ ಅನ್ವರ್ಥಕವಾಗಿ ವಿಶ್ವನಾಥ್ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇವರು ಮೂಲತಃ ಸಾಹಿತಿ ರಾಜಕಾರಣಿ. ಆತ್ಮಕಥನ ಸೇರಿ 7 ಕೃತಿ ರಚಿಸಿದ್ದಾರೆ. ಇದು ಸಾಮಾನ್ಯ ಕೆಲಸವಲ್ಲ. ಇವುಗಳೆಲ್ಲ ಮನೋಯೋಗ್ಯ ಕೃತಿಗಳು. ಹಳ್ಳಿಹಕ್ಕಿ ಎಂಬುದು ಪ್ರಭಾವಿತ ಸಂಕಥನ ಎಂದರು


ಇವರು ದಾರಿ ತಪ್ಪಿ ರಾಜಕಾರಣಕ್ಕೆ ಬಂದಿದ್ದಾರೆ. ಇದರಲ್ಲಿ ತಪ್ಪಿಲ್ಲ. ಬಂದಿದ್ದು ಒಳ್ಳೆಯದ್ದೇ ಆಯ್ತು. ಇವರು ರಾಜಕಾರಣಿಯಲ್ಲ. ಸ್ಟೇಟ್‌ಮನ್. ಅಂದರೆ ರಾಜನೀತಿತಜ್ಞ, ಮುತ್ಸದ್ದಿ ಎಂದು ಬಣ್ಣಿಸಿದರು.


ರಾಜಕೀಯ ಪವಿತ್ರ ಕ್ಷೇತ್ರವಲ್ಲ. ಇದೀಗ ಇದು ಕಲುಷಿತವಾಗಿದೆ. ಪರಿಶುದ್ಧ ಮಾಡುವ ಕೆಲಸವನ್ನು ವಿಶ್ವನಾಥ್‌ನಂತಹವರು ಮಾಡಬೇಕು. ದೇಶ ಹೊತ್ತಿ ಉರಿಯುತ್ತಿದೆ. ಅದಕ್ಕೆ ನಾನಾ ಕಾರಣಗಳಿವೆ. ಬಹುತೇಕರಿಗೆ ರಾಜಕೀಯರಂಗ ಕೊನೆಯ ಹಂತ. ಆದರೆ, ಕೆಲವರಿಗೆ ಇದುವೇ ಮೊದಲ ಆದ್ಯತೆ. ರಾಜಕಾರಣಿಗಳು ಮೊದಲು ಸಾರ್ವಜನಿಕ ಆಧ್ಯಾತ್ಮಿಕರಣವಾಗಬೇಕು. ಈ ದೆಸೆಯಲ್ಲಿ ರಾಜಕೀಯ ಧುರೀಣರು ಸಾಗಬೇಕು ಎಂದು ಕಿವಿಮಾತು ಹೇಳಿದರು.


ಸಾಹಿತಿಗಳು ವಾಸ್ತವವಾಗಿ ರಾಜಕಾರಣಿಗಳಾಗಿದ್ದಾರೆ. ವೃತ್ತಿಪರ ರಾಜಕಾರಣಿಗಳನ್ನು ಇವರು ಮೀರಿಸುತ್ತಾರೆ. ಇದುವೇ ಆತಂಕಕಾರಿ ಸಂಗತಿ ಎಂದು ಕುಟುಕಿದರು.


ವಿಶ್ವನಾಥ ಅಭಿವೃದ್ಧಿ ಪರ ರಾಜಕಾರಣಿ. ಹೇಳುವುದನ್ನು ದಿಟ್ಟವಾಗಿ ಹೇಳುತ್ತಾರೆ. ಹೀಗಾಗಿ, ಇವರೊಬ್ಬ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.
ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ ಮಾತನಾಡಿ, ಹಣಬಲ, ತೋಳ್ಬಲಗಳ ಮಧ್ಯದಲ್ಲಿ ಪ್ರಜಾಪ್ರಭುತ್ವದ ಸೌಂದರ್ಯತೆ ಅವನತಿ ಆಗುತ್ತಿದೆ. ಮಿಲಿಯನ್‌ಗಟ್ಟಲೆ ದುಡ್ಡು ಇರುವವರು, ಕಪ್ಪುಹಣ ಉಳ್ಳವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಎದುರಿಗೆ ಇರುವವರನ್ನು ಟೀಕೆ ಮಾಡುವಾಗ ಜನನಾಯಕರು ಯೋಗ್ಯವಲ್ಲದ ಭಾಷೆಯನ್ನು ಬಳಸುತ್ತಿದ್ದಾರೆ. ಇದರಿಂದ ದೇಶದ ರಾಜಕೀಯ ಸಂಸ್ಕೃತಿ ನಾಶವಾಗುತ್ತಿದೆ ಎಂದರು.


2000ನೇ ಇಸವಿಯ ನಂತರ ರಾಜಕೀಯ ನಿರೂಪಣೆಯನ್ನು ಧರ್ಮೋರಾಜಕಾರಣ ಸಂಘಟನೆಗಳು ಮಾಡತೊಡಗಿವೆ. ಆದ್ಯತೆಗಳಲ್ಲದ ವಿಷಯಗಳನ್ನು ವೈಭವೀಕರಿಸುತ್ತಾ, ಗತಕಾಲದಲ್ಲೇ ಮೈಮರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕವ್ಯಕ್ತಪಡಿಸಿದರು.


ದೇಶದಲ್ಲಿ ಮಾದರಿ ರಾಜಕಾರಣ ಮಾಡಿದಂತಹ ವ್ಯಕ್ತಿಗಳನ್ನು ಕುರಿತು ಅಧ್ಯಯನಾತ್ಮಕ ಪುಸ್ತಕಗಳು ಬರಬೇಕಿದೆ. ಇದರಿಂದ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ರಾಜಕೀಯ ಕಲಿಕೆಗೆ ಹಾಗೂ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದರು.


ಎಂಎಲ್‌ಸಿ ಎಚ್.ವಿಶ್ವನಾಥ್ ಮಾತನಾಡಿ, ಪಕ್ಷ ರಾಜಕಾರಣ ನೇಪತ್ಯಕ್ಕೆ ಸರಿಯುತ್ತಿದೆ. ವ್ಯಕ್ತಿ-ವ್ಯಕ್ತಿಗತ ರಾಜಕಾರಣ ಮುಂಚೂಣಿಗೆ ಬರುತ್ತಿದೆ. ದೇಶದಲ್ಲಿ ಇದೇ ಸ್ಥಿತಿ ಮುಂದುವರಿದರೆ ಚುನಾವಣೆ, ಪ್ರಜಾಪ್ರಭುತ್ವ ಕಣ್ಮರೆಯಾಗಲಿದ್ದು, ಸರ್ವಾಧಿಕಾರಿ ಆಡಳಿತ ವಿಜೃಂಭಿಸಲಿದೆ. 15ನೇ ಶತಮಾನದಲ್ಲೇ ಕುಮಾರವಾಸ್ಯ ರಾಜಕಾರಣವನ್ನು ರಣಹದ್ದುಗಳಿಗೆ ಹೋಲಿಕೆ ಮಾಡಿದ್ದನು. ಆತನ ಹೇಳಿಕೆ ಈಗಲೂ ಪ್ರಸ್ತುತವಾಗಿದೆ ಎಂದರು.


ಸಾಹಿತಿ ಶುಭದಾ ಪ್ರಸಾದ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಪತ್ರಕರ್ತ ಬಿ.ಎಂ. ಹನೀಫ್, ಕೃತಿಕಾರ ಡಾ.ಎನ್.ವಾಸಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net