

ವಿಜಯಪುರ: ವಿಜಯವಾಣಿ ಹಾಗೂ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆ ಹಾಗೂ ಸಹಯೋಗದಲ್ಲಿ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ತಾಯಿ- ಮಗು ವೇಷ ಭೂಷಣ ಸ್ಪರ್ಧೆ ಜನರ ಗಮನ ಸೆಳೆಯಿತು.
ಒಟ್ಟು 9 ಸ್ಪರ್ಧಾಳುಗಳು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದ್ದರು. ಉತ್ತರ ಕರ್ನಾಟಕದ ಗ್ರಾಮೀಣ ವೇಷ ಭೂಷಣದಲ್ಲಿ ಗಮನ ಸೆಳೆದ ವಿಜಯಲಕ್ಷ್ಮಿ ಹಂದ್ರಾಳ- ಸುಮಾ ಹಂದ್ರಾಳ (ಪ್ರಥಮ), ಅಯ್ಯಪ್ಪ ಸ್ವಾಮಿ ಸನ್ನಿವೇಶ ಪ್ರದರ್ಶಿಸಿದ ನೇಹಾ ಕಮತಗಿ- ತನುಶ್ರೀ ಕಮತಗಿ (ದ್ವಿತೀಯ) ಹಾಗೂ ರಾಮ-ಕೌಶಲ್ಯ ಪಾತ್ರಧಾರಿಗಳಾದ ಉಮಾಮಹೇಶ್ವರಿ- ಐಶ್ವರ್ಯ ಗಂಟಿ ಅವರು ತೃತೀಯ ಬಹುಮಾನ ಪಡೆದರು.
ಸ್ಪರ್ಧೆಯಲ್ಲಿ ಕಾಳಿಮಾತಾ ವೇಷ ಭೂಷಣ ಗಮನ ಸೆಳೆಯಿತು. ಸ್ಪರ್ಧೆಯ ನಿರ್ಣಾಯಕಿ, ಸ್ವಸ್ತಿ ಡಾನ್ಸ್- ಪಿಟ್ನೆಸ್ ಸಂಸ್ಥೆಯ ಅನುರಾಧಾ ಸುತಾರ ಮಾತನಾಡಿ, ಸ್ಪರ್ಧಾಗಳ ಡೈಲಾಗ್, ಸನ್ನಿವೇಶ, ಆಂಗಿಕ ಭಾಷೆ, ವೇಷ-ಭೂಷಣದ ಪರಿಣಾಮಕಾರಿ ಪ್ರದರ್ಶನ ಗಮನಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದರು.
ವೇಷ- ಭೂಷಣ ಸ್ಪರ್ಧೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು ಹಾಗೂ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಾಲ ಕಲಾವಿದರನ್ನು ಸನ್ಮಾನಿಸಲಾಯಿತು. ಮೈಸೂರು ದಸರಾ ಭರತನಾಟ್ಯ ಕಲಾವಿದೆ ಶ್ರೇಯಾ ಪಾಟೀಲ, ಪ್ರಾಣೇಶ ಪಾಟೀಲ, ಸೃಷ್ಟಿ ಹಂಗರಗಿ ಇತರರಿದ್ದರು.
ಮೂರು ದಿನಗಳ ಎಜುಕೇಷನ್ ಎಕ್ಸಪೋ ಅರ್ಥಪೂರ್ಣವಾಗಿ ನಡೆದಿದೆ. ಮೇಳದಲ್ಲಿ ಶಾಲೆ ಮಕ್ಕಳು ಹಾಗೂ ಪಾಲಕರಿಗೆ ಉಪಯುಕ್ತ ಮಾಹಿತಿ ದೊರೆತಿದೆ. ಮೂರೂ ದಿನ ಕಲಾವಿದರನ್ನು ಕರೆಸಿ ಪ್ರೋತ್ಸಾಹಿಸಿರುವುದು ಸಂತಸ ತಂದಿದೆ. ಇಂಥ ಮೇಳಗಳನ್ನೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಬೇಕು. | ಪ್ರಾಣೇಶ ಪಾಟೀಲ, ವಿಜಯಪುರ