ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಬೇಕು: ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್ ರಾಮ್

34
Published on

ಮೈಸೂರು: ಸಾರ್ವಜನಿಕರು ತಪ್ಪು ಮಾಡದ ವ್ಯಕ್ತಿತ್ವ ಬೆಳಸಿಕೊಳ್ಳಬೇಕು. ಹಾಗಿದ್ದರಷ್ಟೇ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್ ರಾಮ್ ಹೇಳಿದರು.

‘ನ್ಯಾಯದ ದಿಕ್ಕು, ಮಾಹಿತಿ ಹಕ್ಕು’ ವಿಷಯ ಕುರಿತು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಜ್ಯ ಘಟಕ ವತಿಯಿಂದ ಶನಿವಾರ ನಗರದ ದಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳದೆ ಸಮಾಜ ಬದಲಾವಣೆ ಆಗದು. ಮಾಹಿತಿ ಹಕ್ಕು ಸದಸ್ಯರು ದೊಡ್ಡ ದೊಡ್ಡ ಗುರಿ, ದೊಡ್ಡ, ದೊಡ್ಡ ಕನಸುಗಳನ್ನು ಇಟ್ಟುಕೊಳ್ಳಬೇಕು. ಸಮಾಜ ಸುಧಾರಣೆಗೆ ಹೋರಾಟ ಬಹಳ ಮುಖ್ಯ. ಹೋರಾಟದಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ, ಪ್ರತಿಯೊಬ್ಬರೂ ಹೋರಾಟ ಮನೋಭಾವ ಬೆಳಸಿಕೊಳ್ಳಬೇಕು. ಸರ್ಕಾರ ಮಟ್ಟದಲ್ಲಿ ಕೆಲಸ ಆಗಬೇಕಾದರೆ ಕೇಳಲು ನಮಗೆ ಕೀಳರಿಮೆ ಇದೆ. ಇದನ್ನು ತ್ಯಜಿಸಬೇಕು. ಆರ್‌ಟಿಐ ಕಾಯ್ದೆಗೆ ದೊಡ್ಡ ಶಕ್ತಿ ಇದೆ. ಇದರ ಸದ್ಬಳಕೆ ಆಗಬೇಕು. ಆರ್‌ಟಿಐ ಬಂದಮೇಲೆ ಹೋರಾಟಕ್ಕೆ ಶಕ್ತಿ ಬರುತ್ತಿದೆ. ಜನರಿಗೆ ಇದರಿಂದ ಧ್ವನಿ ಸಿಕ್ಕಿದೆ. ಹೋರಾಟಗಾರರು ಸಮಸ್ಯೆಗಳಿಗೆ ಹಿಂದೆ ಸರಿಯಬೇಡಿ. ಸರಿಯಾದ ಹೋರಾಟ ಮಾಡಿದರೆ ಇಡೀ ಸಮಾಜವೇ ನಿಮ್ಮ ಹಿಂದೆ ಇರುತ್ತದೆ ಎಂದು ತಿಳಿಸಿದರು.

ಗ್ರಾಹಕರ ಹಕ್ಕುಗಳು ಮತ್ತು ಮಾಹಿತಿ ಹಕ್ಕು ತಜ್ಞ ವೈ.ವಿ.ಮುರಳೀಧರನ್, ‘ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮ 2005- ಪಕ್ಷಿನೋಟ’ ವಿಷಯ ಕುರಿತು ಮಾತನಾಡಿ, ಮಾಹಿತಿ ಹಕ್ಕು ಬಳಕೆ ಈಗ ನಿದ್ರಾವಸ್ಥೆಯಲ್ಲಿ ಇದೆ. ಇದನ್ನು ಸರಿಯಾಗಿ ಬಳಕೆ ಮಾಡಲು ಆಗುತ್ತಿಲ್ಲ. ಗ್ರಾಮಾಂತರ ಪ್ರದೇಶದ ಜನರಿಗೂ ಈ ಕಾಯ್ದೆ ತಲುಪಬೇಕು. ಕಾಯ್ದೆ ಬಂದು 20 ವರ್ಷವಾದರೂ ಇನ್ನೂ ಇದರ ಬಗ್ಗೆ ಅರಿವು ಮೂಡಿಸುತ್ತಿರುವುದು ಶೋಚನೀಯ ಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾಯ್ದೆ ಪರಿಣಾಮಕಾರಿಯಾಗಿ ಬಳಕೆ ಆಗಬೇಕು. ಆಗಿದ್ದರಷ್ಟೆ ಕಾಯ್ದೆ ಜೀವಂತಿಕೆ ಸಾಧ್ಯ. ಪ್ರಜಾಪ್ರಭುತ್ವದಲ್ಲಿ ಜನರ ಸಹಭಾಗಿತ್ವ ಅತ್ಯಗತ್ಯ. ಇದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಪರಿಣಾಮವಾಗಿ ಬಳಕೆಯಾಗಬೇಕು ಎಂದು ತಿಳಿಸಿದರು.

ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವೀರೇಶ ಬೆಳ್ಳೂರು, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ, ರಾಜ್ಯ ವೇದಿಕೆ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೇಮಂತ ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net