

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೌಕರರಿಗೆ ಕಳೆದ ಮೂರು ತಿಂಗಳಿಂದ ಸರ್ಕಾರದಿಂದ ಬರಬೇಕಿದ್ದ 21 ಕೋಟಿ ರೂ. ವೇತನಾನುದಾನ ಬಂದಿಲ್ಲ. ಹೀಗಾಗಿ, ನೌಕರರು ವೇತನ ಇಲ್ಲದೇ ಪರದಾಡುವಂತಾಗಿದೆ. ಇದರೊಂದಿಗೆ ಸರ್ಕಾರದಿಂದ ವಿವಿಧ ಮೂಲಗಳಿಂದ ಬರಬೇಕಿದ್ದ 290 ಕೋಟಿ ರೂ. ಬಾಕಿ ಅನುದಾನವೂ ಬಂದಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಇನ್ನೊಂದೆರೆಡು ತಿಂಗಳಲ್ಲಿ ಮಹಾನಗರ ಪಾಲಿಕೆಯನ್ನು ಮುಚ್ಚುವ ದುಸ್ಥಿತಿ ಬರಲಿದೆ ಎಂದು ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯ ಸಭಾನಾಯಕರ ಕೊಠಡಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಕಾಯಂ ಪೌರಕಾಮಿರ್ಕರಿಂದ ಆಯುಕ್ತರವರೆಗೂ ಸರ್ಕಾರವೇ ವೇತನ ನೀಡುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿಂದ ವೇತನಾನುದಾನ ಬಿಡುಗಡೆಗೊಂಡಿಲ್ಲ ಎಂದು ತಿಳಿಸಿದರು.
ಈ ಕುರಿತು ಪ್ರಶ್ನಿಸಿ, ಪಾಲಿಕೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವೇತನಾನುದಾನ ಬಿಡುಗಡೆಗೊಳಿಸುವಂತೆ ಕೋರಲಾಗಿತ್ತು. ಇದಕ್ಕೆ ಉತ್ತರ ನೀಡಿರುವ ಸರ್ಕಾರ, ಪಾಲಿಕೆಯ ಸಾಮಾನ್ಯ ನಿಧಿಯಿಂದ ವೇತನ ಪಾವತಿಸುವಂತೆ ಸೂಚಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
15 ನೇ ಹಣಕಾಸು, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಪಿಂಚಣಿ ಬಾಕಿ, ಎಸ್ಎಫ್ಸಿ ಮುಕ್ತನಿಧಿ, ಅಮೃತ ಯೋಜನೆ ಸೇರಿ 290 ಕೋಟಿ ರೂ. ಅನುದಾನ ಸರ್ಕಾರದಿಂದ ಬರಬೇಕಿದೆ. ಇದರೊಟ್ಟಿಗೆ 6ನೇ ವೇತನ ಮತ್ತು 7 ನೇ ವೇತನದ ವ್ಯತ್ಯಾಸ ಮೊತ್ತವೂ ಪಾಲಿಕೆಗೆ ಬರಬೇಕಿದೆ. ಈ ಎಲ್ಲ ಬಾಕಿ ವೇತನ ಬಿಡುಗಡೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ನಗರಾಭಿವೃದ್ಧಿ ಹಾಗೂ ಹಣಕಾಸು ಇಲಾಖೆ ಕಾರ್ಯದಶಿರ್ಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಂದು ಕಳವಳಪಟ್ಟರು.
ಮಾ. 31ರೊಳಗೆ ಪಾಲಿಕೆಗೆ ನ್ಯಾಯಸಮ್ಮತವಾಗಿ ಬರಬೇಕಿದ್ದ ಅನುದಾನ ಬರದಿದ್ದರೆ ಕಾನೂನು ಹೋರಾಟ ಹಾಗೂ ಮತ್ತಿತರ ಮಾರ್ಗಗಳ ಹೋರಾಟದ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ನ್ಯಾಯಸಮ್ಮತವಾಗಿ ಬರಬೇಕಿದ್ದ ಅನುದಾನ ಬಿಡುಗಡೆಗೊಳಿಸಲು ನಿರ್ಲಕ್ಷ$್ಯ ತೋರುತ್ತಿರುವ ಸರ್ಕಾರದ ಕ್ರಮದ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಹೇಳಿದರು.
ರಾಜ್ಯಪಾಲರ ಭೇಟಿಗಾಗಿ ಸರ್ವಪಕ್ಷ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಅದಕ್ಕೂ ಮೊದಲು ಜಿಲ್ಲಾಧಿಕಾರಿ ಮುಖಾಂತರವೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ, ಹಣಕಾಸು ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದಶಿರ್ಗಳಿಗೆ ಬಾಕಿ ಅನುದಾನ ಬಿಡುಗಡೆಗಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಸ್ಥಳಿಯ ಸಂಸ್ಥೆಗಳನ್ನು ಸದೃಢಗೊಳಿಸುವುದು ಸರ್ಕಾರದ ಕರ್ತವ್ಯ. ಆದರೆ, ಸಕಾಲಕ್ಕೆ ಅನುದಾನ ಬಿಡುಗಡೆಗೊಳಿಸದೇ ಸರ್ಕಾರವೇ ಸ್ಥಳಿಯ ಸಂಸ್ಥೆಗಳನ್ನು ರ್ದುಬಲಗೊಳಿಸುತ್ತಿದೆ ಎಂದು ದೂರಿದರು.
ಪಾಲಿಕೆ ಸದಸ್ಯ ಶಿವು ಹಿರೇಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.