ಕರೊನಾ ಸೋಂಕಿಗೆ ಗಂಡಸರೇ ಹೆಚ್ಚು ಬಲಿ: ಬೆಚ್ಚಿಬೀಳಿಸುತ್ತೆ ಈ ವರದಿ

corona case
Published on

| ಶ್ರೀಕಾಂತ ಅಕ್ಕಿ ಬಳ್ಳಾರಿ

ಮಹಾಮಾರಿ ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ಪುರುಷರೇ ಹೆಚ್ಚಿದ್ದಾರೆ ಎಂಬ ಆತಂಕಕಾರಿ ವರದಿ ಬಯಲಾಗಿದೆ. ಇದು ಗಣಿನಾಡು ಖ್ಯಾತಿಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೂ ಅನ್ವಯಿಸಿದೆ.

ಅವಳಿ ಜಿಲ್ಲೆ ವ್ಯಾಪ್ತಿಯಲ್ಲಿ ಕರೊನಾ ಸೋಂಕಿಗೆ ಕಡಿವಾಣ ಬಿದ್ದಿಲ್ಲ. ದಿನದಿಂದ ದಿನಕ್ಕೆ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಈ ನಡುವೆ ಮೊದಲ ಮತ್ತು ಎರಡನೇ ಅಲೆಯಲ್ಲಿ ಅತಿ ಹೆಚ್ಚು ಪುರುಷರೇ ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಅವಳಿ ಜಿಲ್ಲೆ ವ್ಯಾಪ್ತಿಯಲ್ಲಿ ಕರೊನಾ ಸೋಂಕಿಗೆ ಮಹಿಳೆಯರಿಗಿಂತ ಪುರುಷರು ವ್ಯಾಪಕ ಪ್ರಮಾಣದಲ್ಲಿ ತುತ್ತಾಗಿದ್ದಾರೆ. ಜಿಲ್ಲಾಡಳಿತ ಮೊದಲ ಮತ್ತು ಎರಡನೇ ಅಲೆಗಳನ್ನು ಅವಲೋಕಿಸಿ, ಲಿಂಗಾನುಪಾತದಲ್ಲಿ ಯಾರು ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ಪುರುಷರೇ ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂಬ ಮಾಹಿತಿಯಿದ್ದು, 'ವಿಜಯವಾಣಿ'ಗೆ ಲಭ್ಯವಾಗಿದೆ.

ಒಟ್ಟು ಎರಡು ಅಲೆಯಲ್ಲಿ 698 ಪುರುಷರು ಮೃತಪಟ್ಟಿದ್ದರೆ, 392 ಮಹಿಳೆಯರು ಕರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ ಮೊದಲ ಅಲೆಯಲ್ಲಿ 391, ಎರಡನೇ ಅಲೆಯಲ್ಲಿ 307 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ. ಮಹಿಳೆಯರು ಕ್ರಮವಾಗಿ 206 ಮತ್ತು 186 ಮೃತಪಟ್ಟಿದ್ದಾರೆ. ಒಟ್ಟು ಈವರೆಗೆ 1090 ಸಾವಾಗಿದ್ದು, ಇದರಲ್ಲಿ 392 ಮಹಿಳೆಯರಿದ್ದಾರೆ.

ಮೊದಲ ಅಲೆಯಲ್ಲಿ ಪುರುಷರ ಡೆತ್ ರೇಟ್ ಪ್ರಮಾಣ ಶೇ.65ರಷ್ಟಿದ್ದರೆ ಎರಡನೇ ಅಲೆಯಲ್ಲಿ ಶೇ.62ರಷ್ಟಿದೆ. ಅದರಲ್ಲೂ ಮಹಿಳೆಯರಿಗಿಂತ ಪುರುಷರ ಸಾವಿನ ಪ್ರಮಾಣ ಹೆಚ್ಚಿದೆ.

ಕರೊನಾ ಸೋಂಕಿನಿಂದ ಗುಣಮುಖವಾದರಲ್ಲಿ ಕಪ್ಪು ಶೀಲಿಂಧ್ರ(ಬ್ಲ್ಯಾಕ್ ಫಂಗಸ್) ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿರುವ ಎಚ್ಚರಿಕೆಯನ್ನು ಹಲವು ವೈದ್ಯರು ನೀಡಿದ್ದಾರೆ. ಹೀಗಾಗಿ ನಾಗರಿಕರು ಎಚ್ಚರಿಕೆಯಿಂದ ಇರಬೇಕಿದೆ.

ಮೊದಲ ಅಲೆಯಲ್ಲಿ ವೃದ್ಧರು, ವಯಸ್ಕರು ಸೋಂಕಿಗೆ ಬಲಿಯಾಗಿದ್ದರೆ, ಎರಡನೇ ಅಲೆಯಲ್ಲಿ ಹೆಚ್ಚಾಗಿ ವಯಸ್ಕರರೇ ಸೋಂಕಿಗೆ ಬಲಿಯಾಗಿದ್ದಾರೆ. 20ರಿಂದ 40 ವರ್ಷದೊಳಗಿನವರ ಪೈಕಿ 120 ಜನ ಮೃತಪಟ್ಟಿದ್ದು, ಇದರಲ್ಲಿ 81 ಜನ ಎರಡನೇ ಅಲೆ ಸೋಂಕಿಗೆ ಮೃತಪಟ್ಟವರು. ಉಳಿದಂತೆ 40-60ವಯಸ್ಸಿನೊಳವರು ಈವರೆಗೆ 461, 61-80 ವಯಸ್ಸಿನವರು 437, 80 ವರ್ಷ ಮೇಲ್ಪಟ್ಟವರು 75 ಜನ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಬಳ್ಳಾರಿ, ಹೊಸಪೇಟೆ ತಾಲೂಕಿನಲ್ಲಿಯೇ ಹೆಚ್ಚು ಸಾವು: ಎರಡೂ ಜಿಲ್ಲೆ ವ್ಯಾಪ್ತಿಯ ಪೈಕಿ ಬಳ್ಳಾರಿ ಮತ್ತು ಹೊಸಪೇಟೆ ತಾಲೂಕುಗಳಲ್ಲಿಯೇ ಸೋಂಕಿಗೆ ಹೆಚ್ಚಿನ ಸಾವಾಗಿವೆ. ಬಳ್ಳಾರಿಯಲ್ಲಿ ಮೊದಲ ಅಲೆಗೆ 280, ಹೊಸಪೇಟೆಯಲ್ಲಿ 97 ಮೃತಪಟ್ಟರೆ, ಎರಡನೇ ಅಲೆಯಲ್ಲಿ ಕ್ರಮವಾಗಿ 275, 76 ಜನ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net