ಹಸೆಮಣೆಗೇರಬೇಕಿದ್ದ ಯುವಕ ಕರೊನಾಗೆ ಬಲಿ

corona death case
Published on

ತುಮಕೂರು: ರಾಜ್ಯ ರಾಜಧಾನಿ ಸಮೀಪದ ತುಮಕೂರು ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ದಿನದಿಂದ ದಿನಕ್ಕೇ ಹೆಚ್ಚುತ್ತಲೇ ಇದೆ. ಸಾವು-ನೋವಿನ ಪ್ರಮಾಣ ಕ್ಷಣಕ್ಷಣಕ್ಕೂ ಏರುತ್ತಿದ್ದು, ಮದುವೆ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಯುವಕನೊಬ್ಬ ಬಲಿಯಾಗಿದ್ದಾನೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಕಟ್ಟೆ ಗೊಲ್ಲರಟ್ಟಿ ಗ್ರಾಮದ 28 ವರ್ಷದ ಯುವಕನಿಗೆ ನಾಲ್ಕು ದಿನದಳ ಹಿಂದೆ ಕರೊನಾ ಸೋಂಕು ತಗುಲಿತ್ತು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡಿ ತಿಪಟೂರಿಗೆ ತೆರಳಿದ್ದರು. ತಿಪಟೂರಲ್ಲೂ ಬೆಡ್ ಸಿಗದೆ ಹಾಸನದ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಿದ್ದರು.

ಆಸ್ಪತ್ರೆಗೆ ದಾಖಲಿಸಿದ ಅರ್ಧಗಂಟೆಯಲ್ಲೇ‌ ಯುವಕ ಕೊನೆಯುಸಿರೆಳೆದಿದ್ದಾನೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಬೆಡ್​ ಜತೆಗೆ ಚಿಕಿತ್ಸೆ ಸಿಕ್ಕಿದ್ದರೆ ಆತ ಬದುಕುಳಿಯುತ್ತಿದ್ದ ಎಂದು ಮೃತನ ಕುಟುಂಬಸ್ಥರು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಯುವಕನ ಮದುವೆ ಶೀಘ್ರದಲ್ಲೇ ನೆರವೇರುತ್ತಿತ್ತು. ಇತ್ತೀಚಿಗಷ್ಟೆ ಯುವಕ ಮದುವೆ ನಿಶ್ಚಯವಾಗಿದ್ದು, ಕುಟುಂಬಸ್ಥರು ಸಿದ್ಧತೆಯಲ್ಲಿ ತೊಡಗಿದ್ದರು. ಇದೀಗ ಕರೊನಾ ರೂಪದಲ್ಲಿ ಬಂದ ಜವರಾಯ ಯುವಕನ ಪ್ರಾಣ ಹೊತ್ತೊಯ್ದಿದ್ದು, ಮೃತನ ಕುಟುಂಬಸ್ಥರಿಗೆ ದಿಕ್ಕುತೋಚದಂತಾಗಿದೆ. ಮೃತ ಯುವಕ ತುಮಕೂರು ನಗರದ ಖಾಸಗಿ ಮೊಬೈಲ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net