ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ

hukkeri- sucide
Published on

ಚಿಕ್ಕೋಡಿ: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ‌ ಬೋರಗಲ್ ಗ್ರಾಮದಲ್ಲಿ ಸಂಭವಿಸಿದ್ದು, ಸ್ಥಳದಲ್ಲಿ ಡೆತ್​ನೋಟ್​ ಪತ್ತೆಯಾಗಿದೆ.

ಗೋಪಾಲ್​ ಹಾದಿಮನಿ(46), ಇವರ ಮಕ್ಕಳಾದ ಸೌಮ್ಯಾ ಹಾದಿಮನಿ(19), ಶ್ವೇತಾ ಹಾದಿಮನಿ(16), ಸಾಕ್ಷಿ ಹಾದಿಮನಿ(11), ಸೃಜನ‌ ಹಾದಿಮನಿ(8) ಮೃತ ದುರ್ದೈವಿಗಳು. ಗೋಪಾಲ್​ ಪತ್ನಿ ಜಯಾ ಅವರು ಬ್ಲ್ಯಾಕ್ ಫಂಗಸ್​ಗೆ ಕಳೆದ ಜು.6 ರಂದು ಬಲಿಯಾಗಿದ್ದರು. ಇದಾದ ಮೂರು ತಿಂಗಳಿಗೆ ಗೋಪಾಲ್​ ತನ್ನ ನಾಲ್ವರು ಮಕ್ಕಳಿಗೂ ವಿಷ ಕುಡಿಸಿ, ತಾನೂ ಕುಡಿದು ದುರಂತ ಅಂತ್ಯಕಂಡಿದ್ದಾರೆ. ಸಾವಿಗೂ ಮುನ್ನ ಗೋಪಾಲ್​ ಬರೆದಿಟ್ಟಿದ್ದ ಡೆತ್​ನೋಟ್​ ಪತ್ತೆಯಾಗಿದೆ.

'ನಮ್ಮ ಸಾವಿಗೆ ಕಾರಣ?' ಎಂದು ಪ್ರಶ್ನೆ ಮಾಡಿರುವ ಗೋಪಾಲ್​ ಕಾರಣ ಬರೆಯದೆ ಹಾಗೇ ಬಿಟ್ಟಿದ್ದಾರೆ. ಅಷ್ಟೇ ಅಲ್ಲ, 'ಮನೆಯ ದೇವರ ಫೋಟೋ ಹಿಂದೆ 20 ಸಾವಿರ ರೂಪಾಯಿ ಇಟ್ಟಿದ್ದೀನಿ. ಈ ಹಣವನ್ನ ಬಳಸಿಕೊಂಡು ನಮ್ಮ ಅಂತ್ಯಸಂಸ್ಕಾರ ಮಾಡಿ. ನಮ್ಮ ಅಂತ್ಯಕ್ರಿಯೆ ಮಾಡಿದವರಿಗೆ ನನ್ನ ಧನ್ಯವಾದಗಳು' ಎಂದು ಬರೆದಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. ಇನ್ನು ಡೆತ್​ನೋಟ್​ನಲ್ಲಿನ ಮಾಹಿತಿ ಆಧರಿಸಿ ನೋಡಿದಾಗ ದೇವರ ಫೋಟೋ ಹಿಂದೆ ಹಣ ಪತ್ತೆಯಾಗಿದೆ.

ಬ್ಲ್ಯಾಕ್​ ಫಂಗಸ್​ನಿಂದ ಪತ್ನಿ ಮೃತಪಟ್ಟ ನೋವಿನಲ್ಲೇ ಇದ್ದ ಗೋಪಾಲ್​, ಜೀವನದಲ್ಲಿ ತೀವ್ರ ಜಿಗುಪ್ಸೆಗೊಂಡಿದ್ದರು. ಇದೇ ನೋವಿನಲ್ಲಿ ಗೋಪಾಲ್​ ಸಾಯುವ ನಿರ್ಧಾರಕ್ಕೆ ಬಂದು ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಐವರ ಸಾವು ಊರಿಗೇ ಊರನ್ನೇ ಬೆಚ್ಚಿಬೀಳಿಸಿದೆ. ಸಂಕೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net