

ಬೆಂಗಳೂರು: ಕರೊನಾ ನಾಲ್ಕನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಕರೆದಿರುವ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12.30ಕ್ಕೆ ಸಭೆ ನಿಗದಿಯಾಗಿದೆ. ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಡಾ.ಕೆ.ಸುಧಾಕರ್, ತಾಂತ್ರಿಕ ತಜ್ಞರ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಹರಡಿರುವ ಸೋಂಕು ಪ್ರಮಾಣ, ರಾಜ್ಯದ ಪರಿಸ್ಥಿತಿ ಅವಲೋಕನ, ತಜ್ಞರು ನೀಡಿದ ಎಚ್ಚರಿಕೆ, ಕೇಂದ್ರ ಸರ್ಕಾರದ ಸೂಚನೆ, ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಪ್ರಕಾರ ಕೈಗೊಂಡ ಕ್ರಮಗಳ ಅನುಷ್ಠಾನ ಇತ್ಯಾದಿ ಅಂಶಗಳನ್ನು ಸಿಎಂ ಬೊಮ್ಮಾಯಿ ಅವಲೋಕಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಿದ್ದಾರೆ.
ಈಗಾಗಲೇ ದೆಹಲಿ, ಮಹಾರಾಷ್ಟ್ರ ಸೇರಿ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗಿವೆ. ನಾಲ್ಕನೇ ಅಲೆಗೆ ಕಾರಣವಾಗಲಿದೆ ಎನ್ನಲಾದ ಒಮಿಕ್ರಾನ್ ಉಪತಳಿ ಬಿಎ.2 ವೈರಾಣು ಹಲವೆಡೆ ಪತ್ತೆಯಾಗಿದ್ದು, ಮೂರ್ನಾಲ್ಕು ವಾರಗಳಲ್ಲಿ ರಾಜ್ಯಕ್ಕೂ ಕಾಲಿಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 1676ರ ಆಸುಪಾಸಿನಲ್ಲಿದ್ದರೆ, ಹೊಸದಾಗಿ 63 ಪ್ರಕರಣಗಳು ಭಾನುವಾರ ಬೆಳಗಿನವರೆಗೆ ದಾಖಲಾಗಿವೆ. ಸೋಂಕು ಖಚಿತತೆ ಪ್ರಮಾಣ ಶೇ.0.90ರಷ್ಟಿದ್ದರೆ, ಸೋಂಕಿನಿಂದ ಮರಣ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಹಿಂದಿನ ಮೂರು ಅಲೆಗಳ ಅನುಭವ, ತಜ್ಞರ ಎಚ್ಚರಿಕೆ ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.