

ರಾಯಚೂರು: ವಿದ್ಯಾರ್ಥಿಗಳು ಸಹಕಾರ ಮನೋಭಾವ ರೂಢಿಸಿಕೊಳ್ಳುವ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೋಡ ತಿಳಿಸಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟದಿಂದ ಯುವಜನರು ಸಹಕಾರ ಚಳುವಳಿಯಲ್ಲಿ ಭಾಗವಹಿಸುವಿಕೆ ಕುರಿತು ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಕಾಲೇಜು ವ್ಯಾಪ್ತಿಯಲ್ಲಿ ಗ್ರಾಹಕರ ಸಹಕಾರ ಸಂಘಗಳನ್ನು ರಚಿಸಿಕೊಂಡು ತಮಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪಡೆಯಬಹುದಾಗಿದೆ. ಇದರಿಂದ ಉಳಿತಾಯವೂ ಆಗಲಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರಬೇಕು ಎಂದು ತಿಳಿಸಿದರು.
ಕಾಲೇಜು ಪ್ರಾಚಾರ್ಯೆ ಡಾ.ಪುಷ್ಪಾ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಮುಂದಾಳತ್ವದ ಗುಣ ಇದ್ದಾಗ ಮಾತ್ರ ಉತ್ತಮ ನಾಯಕರಾಗಬಹುದು. ಉತ್ತಮ ಆಲಿಕೆಯ ಜತೆಗೆ ಮಾತುಗಾರ ಮತ್ತು ನಿರ್ಧಾರಕನಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಯುವಕರಿಗೆ ಹಲವಾರು ಉದ್ಯೋಗವಕಾಶಗಳಿವೆ. ಸಹಕಾರ ಮಹಾಮಂಡಳ ನಡೆಸುವ ಸಹಕಾರ ಡಿಪ್ಲೊಮಾ ತರಬೇತಿ ಪಡೆದುಕೊಂಡು ಸಹಕಾರ ಇಲಾಖೆಯಲ್ಲಿ ಉದ್ಯೋಗ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕ ಎಸ್.ಜಿ.ಕಲ್ಲಯ್ಯಸ್ವಾಮಿ, ಕಾಲೇಜು ಉಪನ್ಯಾಸಕರಾದ ಡಾ.ಉಮಾದೇವಿ, ರಂಗನಾಥ, ಡಾ.ಜ್ಯೋತಿ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಕಾರಿ ಮಂಜುಳಾ, ಸಹಕಾರ ಶಿಕ್ಷಕಿ ಅಶ್ವಿನಿ ಉಪಸ್ಥಿತರಿದ್ದರು.