

ದೋರನಹಳ್ಳಿ: ಸೀಮಂತ ಕಾರ್ಯಕ್ರಮದಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ. 19 ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್ಎಲ್) ನಿವೃತ್ತ ನೌಕರನ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ಸೀಮಂತ ಕಾರ್ಯಕ್ರಮ ನಡೆಯುತ್ತಿತ್ತು. ಮನೆ ಹೊರಗಡೆ ಅಡುಗೆಗೆ ಸಿದ್ಧತೆ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಥಳದಲ್ಲಿದ್ದ 23ಕ್ಕೂ ಹೆಚ್ಚು ಜನರ ಕೈ, ಕಾಲು ಸುಟ್ಟಿವೆ. ಗಾಯಾಳುಗಳನ್ನು ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಎಲ್ಲರನ್ನೂ ಕಲುಬುರಗಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ (15 ತಿಂಗಳ ಮಗು), ಆದ್ಯಾ (3) ಹಾಗೂ ನಿಂಗಮ್ಮ (85) ಶುಕ್ರವಾರ ಕೊನೆಯುಸಿರೆಳೆದರು. ಶನಿವಾರ ಗಂಗಮ್ಮ(51) ಮೃತಪಟ್ಟಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.