

ಬಂಗಾರಪೇಟೆ: ಗುತ್ತಿಗೆದಾರರ ರ್ನಿಲಕ್ಷ$್ಯದಿಂದ ಡಾಂಬರೀಕರಣ ಮಾಡಲು ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳನ್ನು ಹಾಕಿ ಮೂರು ತಿಂಗಳಾದರೂ ಡಾಂಬರೀಕರಣ ಮಾಡದೆ ನಾಪತ್ತೆಯಾಗಿರುವುದರಿಂದ ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಪಲ್ಲಿಯಿಂದ ಕೀರಮಂದೆ ಗ್ರಾಮದವರೆಗೂ 1.5 ಕಿ.ಮೀ ರಸ್ತೆ ಹಾಳಾಗಿತ್ತು. ರಸ್ತೆ ದುರಸ್ತಿ ಹೆಸರಲ್ಲಿ ಇರುವ ರಸ್ತೆಯನ್ನು ಅಗೆದು ಜಲ್ಲಿ ಕಲ್ಲು ಹಾಕಿ ಮೂರು ತಿಂಗಳಿಂದ ಗುತ್ತಿಗೆದಾರರು, ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ. ರಸ್ತೆ ಅಭಿವೃದ್ಧಿಗೊಳಿಸುವಂತೆ ಗ್ರಾಮಸ್ಥರು ಶಾಸಕರಿಗೆ ಸಲ್ಲಿಸಿದ್ದರು. ಮನವಿ ಮೇರೆಗೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಡಾಂಬರೀಕರಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಮಂಜೂರು ಮಾಡಿಸಿದ್ದರು. ಆದರೆ ಗುತ್ತಿಗೆದಾರರೊಬ್ಬರು ಕಾಮಗಾರಿಯ ಗುತ್ತಿಗೆ ಪಡೆದು ಅರ್ಧಂಬದ್ದ ಕೆಲಸ ಮಾಡಿ ಹೋದವರು ಒತ್ತ ಮುಖ ಮಾಡಿಲ್ಲ.
ಇದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಜಲ್ಲಿಯಿಂದ ಕೂಡಿದ ರಸ್ತೆಯಲ್ಲಿ ಹಗಲಲ್ಲೇ ವಾಹನಗಳನ್ನು ಚಲಾಯಿಸಲು ಹರಸಾಹಸ ಮಾಡಬೇಕು. ಇನ್ನು ರಾತ್ರಿಯ ಹೇಳ ತೀರದ ಕಥೆಯಾಗಿದೆ. ನಿತ್ಯ ಗ್ರಾಮದಿಂದ ಶಾಲಾ ವಾಹನಗಳು ಜಲ್ಲಿಕಲ್ಲು ತುಂಬಿರುವ ರಸ್ತೆಯಲ್ಲಿ ಸಮಯಕ್ಕೆ ಸಂಚರಿಸಲಾಗದೆ ಮಕ್ಕಳು ಶಾಲೆಗೆ ತಡವಾಗಿ ಹೋಗುವಂತಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಆದಷ್ಟು ಬೇಗ ಗುತ್ತಿಗೆದಾರ ಅರ್ಧಕ್ಕೆ ನಿಲ್ಲಿಸಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.