

ಹಾಸನ: ಕರೊನಾ ಭೀತಿ ಹಿನ್ನೆಲೆಯಲ್ಲಿ ಮಡಿಕೇರಿಯಿಂದ ಕಾಫಿ ತೋಟದ ಕಾರ್ಮಿಕರನ್ನು ಟಾರ್ಪಲ್ ಹೊದಿಸಿದ ಲಾರಿಯಲ್ಲಿ ಬಚ್ಚಿಟ್ಟು ಹಾವೇರಿಗೆ ಸಾಗಿಸುತ್ತಿದ್ದ ಗುತ್ತಿಗೆದಾರ ಅರಕಲಗೂಡು ತಾಲೂಕಿನ ಕೊಡಗು ಜಿಲ್ಲೆಯ ಗಡಿ ಸಿದ್ದಾಪುರಗೇಟ್ ನಲ್ಲಿ ಸಿಕ್ಕಿ ಬಿದ್ದಿದ್ದು, ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾವೇರಿ ಮೂಲದವರು ಎನ್ನಲಾಗಿರುವ ಕಾರ್ಮಿಕರನ್ನು ಕೂಲಿ ಕೆಲಸಕ್ಕೆಂದು ಮಡಿಕೇರಿಗೆ ಕರೆಸಿಕೊಂಡಿದ್ದರು. ಕರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮೂವತ್ತಕ್ಕೂ ಅಧಿಕ ಕೂಲಿಕಾರ್ಮಿಕರನ್ನು ಲಾರಿಯಲ್ಲಿ ಬಚ್ಚಿಟ್ಟು ಮಡಿಕೇರಿಯಿಂದ ಹಾವೇರಿಗೆ ಕೊಣನೂರು,ಅರಕಲಗೂಡು,ಹಾಸನ ,ಅರಸೀಕೆರೆ ಮಾರ್ಗವಾಗಿ ಕಳುಹಿಸಿಕೊಡಲು ಯತ್ನಿಸುತ್ತಿದ್ದರು.
ಅರಕಲಗೂಡು ಮತ್ತು ಕೊಡಗು ಗಡಿ ಭಾಗವಾದ ಸಿದ್ದಾಪುರ ಗೇಟ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಅನುಮಾನಗೊಂಡ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಲಾರಿಯನ್ನು ತಪಾಸಣೆ ಮಾಡಿದಾಗ ಲಾರಿಯಲ್ಲಿ 30ಕ್ಕೂ ಅಧಿಕ ಮಂದಿ ಮಹಿಳೆಯರು ಸೇರದಂತೆ ಕೂಲಿ ಕಾರ್ಮಿಕರು ಇರುವುದು ಗೊತ್ತಾಗಿದೆ.
ಕೂಲಿ ಕಾರ್ಮಿಕರನ್ನು ಸಾಗಿಸುವ ವೇಳೆ ಲಾರಿಯ ಮೇಲ್ಭಾಗಕ್ಕೆ ಟಾರ್ಪಲ್ ಅನ್ನು ಹೊದಿಸಿ ಸಂಪೂರ್ಣವಾಗಿ ಮುಚ್ಚಲಾಗಿತ್ತು.
ಚಾಲಕ ಸಮೇತ ಲಾರಿ ಹಾಗೂ ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.