

ಅರಕಲಗೂಡು: ಕನ್ನಡ ನಾಡು-ನುಡಿ, ಸಂಸ್ಕೃತಿ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಅವರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ ಎಂದು ಕರವೇ ಜಿಲ್ಲಾ ಅಧ್ಯಕ್ಷ ಮನು ತಿಳಿಸಿದರು.
ಪಟ್ಟಣದ ಅರಸು ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರು.
ನಾಡಿನಲ್ಲಿ ಅನ್ಯ ಭಾಷಿಗರ ದೌರ್ಜನ್ಯ ದಬ್ಬಾಳಿಕೆ ಅನೀತಿಗಳ ವಿರುದ್ಧ ದಿಟ್ಟ ಹೋರಾಟವನ್ನು ರಕ್ಷಣಾ ವೇದಿಕೆ ಸಂಘಟನಾತ್ಮಕವಾಗಿ ನಡಸಿಕೊಂಡು ಬಂದಿದೆ. ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ, ನಾಡಿನ ಯುವಕರಿಗೆ ಉದ್ಯೋಗ ಮೀಸಲು ಹೋರಾಟ ಹಾಗೂ ಮರಾಠಿ ಪುಂಡರ ದೌರ್ಜನ್ಯ ವಿರುದ್ಧ ಹಾಗೂ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಅವಿರತ ಹೋರಾಟ ನಡೆಸಲಾಗಿದೆ. ನಾಡಿನ ಯುವಶಕ್ತಿ ಕರವೇ ಸಂಘಟನೆ ಬೆಂಬಲಿಸಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಜೆ.ಶ್ರೀನಿವಾಸ, ಸೀತಾರಾಮ್, ಜಿಲ್ಲಾ ವಕ್ತಾರ ದೊಡ್ಡಮಗ್ಗೆ ರಾಜೇಂದ್ರ, ಜಿಲ್ಲಾ ಕಾರ್ಯದರ್ಶೀ ರಘು ಪಾಳ್ಯ, ಸಂಘಟನಾ ಕಾರ್ಯದರ್ಶಿ ಅಲ್ವಿನ್, ತಾಲೂಕು ಘಟಕದ ಅಧ್ಯಕ್ಷ ಸೋಮು, ಗೌರವಾಧ್ಯಕ್ಷ ಎನ್.ರವಿಕುಮಾರ್ ಇತರರಿದ್ದರು.
ಪದಾಧಿಕಾರಿಗಳ ಆಯ್ಕೆ: ಅರಕಲಗೂಡು ನಗರ ಘಟಕದ ಅಧ್ಯಕ್ಷರಾಗಿ ಲಿಂಗರಾಜ್, ದೊಡ್ಡಮಗ್ಗೆ ಹೋಬಳಿ ಘಟಕದ ಅಧ್ಯಕ್ಷರಾಗಿ ರವಿಕುಮಾರ್, ಕೊಣನೂರು ಹೋಬಳಿ ಅಧ್ಯಕ್ಷರಾಗಿ ರಾಜೇಶ್, ರಾಮನಾಥಪುರ ಹೋಬಳಿ ಅಧ್ಯಕ್ಷರಾಗಿ ಪುಟ್ಟರಾಜ್, ಮಲ್ಲಿಪಟ್ಟಣ ಹೋಬಳಿ ಅಧ್ಯಕ್ಷರಾಗಿ ವಸಂತ ಆಯ್ಕೆಯಾದರು. ಇದಕ್ಕೂ ಮುನ್ನ ತಾಲೂಕು ಕರವೇ ಅಧ್ಯಕ್ಷ ಜಿಮ್ ಸೋಮು ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಆಟೋ ಬೈಕ್ ಮತ್ತು ಕಾರುಗಳ ಜಾಥಾ ನಡೆಸಲಾಯಿತು.