ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ ಸಂವಿಧಾನ

17MDG 3P1
Published on

ಮೂಡಿಗೆರೆ: ಭಾರತದಲ್ಲಿ ಸಂವಿಧಾನ ಜಾರಿಗೆ ಬರುವ ಮೊದಲು ಜಾತಿ ತಾರತಮ್ಯ ಹೆಚ್ಚಾಗಿತ್ತು. ಮಹಿಳೆಯರಿಗೆ ಸಮಾನ ಅವಕಾಶಗಳಿರಲಿಲ್ಲ. ಸಂವಿಧಾನ ಮೂಲಭೂತ ಹಕ್ಕುಗಳ ಮೂಲಕ ಎಲ್ಲರೂ ಸಮಾನ ಅವಕಾಶ ನೀಡಿದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ರಮೇಶ್ ಹೇಳಿದರು.

ಡಿಎಸ್‌ಬಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಭಾರತದ ಸಂವಿಧಾನದಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯ, ರಾಜ್ಯಶಾಸ್ತ್ರ ವಿಷಯವಾಗಿ ವಿಶ್ಲೇಷಣೆ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯ ನೀಡಿದರೂ ಜಾತಿ ತಾರತಮ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿರುವುದು ವಿಷಾದನೀಯ. ಇಂತಹ ದೌರ್ಜನ್ಯಗಳನ್ನು ತಡೆಗಟ್ಟಿದಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ವಿದ್ಯಾವಂತರು ಹೆಚ್ಚಾಗಿ ಜಾತಿ, ಧರ್ಮದ ವಿಚಾರಗಳನ್ನು ಮುಂದಿಟ್ಟು ಜನರನ್ನು ಪರಸ್ಪರ ಎತ್ತಿ ಕಟ್ಟಿ ಪ್ರಚೋದನೆ ನೀಡುತ್ತಿದ್ದಾರೆ. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದರಿಂದ ಅರಾಜಕತೆ ಹೆಚ್ಚಾಗುತ್ತಿದೆ. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂವಿಧಾನವನ್ನು ಸರಿಯಾಗಿ ಅರ್ಥೈಸಿ ಸಾಮಾನ್ಯ ಜನರಿಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್.ನೌಶಾದ್, ಉಪನ್ಯಾಸಕರಾದ ಶಿವರಾಜಕುಮಾರ್ ಗುರುರಾಜ್ ಡಾ.ಅಪೂರ್ವ ಬಿ. ರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net