ಸಮಪಾಲು, ಸಮಬಾಳು ಕಲ್ಪಿಸುವ ಸಂವಿಧಾನ

A constitution that envisages equal share and equality
Published on

ಶಿಗ್ಗಾಂವಿ: ಸಾಮಾನ್ಯರಿಗೂ ಸಮಾನ ಬದುಕಿನ ಅವಕಾಶ ನೀಡಿದ ಸಂವಿಧಾನ ಎಲ್ಲರ ಪಾಲಿನ ಮಹಾನ್ ಗ್ರಂಥವಾಗಿದೆ. ಇಂತಹ ಸಂವಿಧಾನದ ಮಹತ್ವ ಅರಿಯಲು ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ದೇಶವು ಬ್ರಿಟಿಷರ 200 ವರ್ಷಗಳ ಆಡಳಿತದಿಂದ ಮುಕ್ತಗೊಂಡು ಸ್ವತಂತ್ರ ಪಡೆಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ನಮ್ಮ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಮೂಲಕ ಪ್ರತಿಯೊಬ್ಬರಿಗೂ ಸಮಾನ ಹಕ್ಕನ್ನು ಕೊಡಲಾಗಿದೆ ಎಂದರು.

ರಾಷ್ಟ್ರಧ್ವಜ, ದೇಶಾಭಿಮಾನ, ಶಿಕ್ಷಣ, ಸಮಾನತೆ ಸೇರಿದಂತೆ ಹಲವಾರು ಕರ್ತವ್ಯ ಅರಿತು ನಡೆಯುವ ಮಾರ್ಗದರ್ಶಿಯಾದಂತ ಸಂವಿಧಾನದನುಸಾರ ಎಲ್ಲರೂ ಬದುಕು ರೂಪಿಸಿಕೊಳ್ಳಬೇಕು. ಈ ಜಾಗೃತಿ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಸಂವಿಧಾನ ಗೌರವಿಸುವ ಕೆಲಸ ನಿರಂತರವಾಗಬೇಕು ಎಂದರು.

ಎಸ್‌ಬಿಬಿಎಂಡಿ ಕಾಲೇಜ್ ಉಪನ್ಯಾಸಕಿ ಸಾವಿತ್ರಿ ಪೂಜಾರ ಉಪನ್ಯಾಸ ನೀಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದ ಪೌರರ ಬೇಕು-ಬೇಡಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ಅಂಬೇಡ್ಕರ್ ಅವರು ನಮ್ಮ ಸಂವಿಧಾನ ರಚಿಸಿದ್ದಾರೆ ಎಂದರು.

ಉಪ ವಿಭಾಗಾಧಿಕಾರಿ ಮಹಮ್ಮದ್ ಖಿಜರ್ ಮಾತನಾಡಿದರು. ಶಿಕ್ಷಕ ಎಚ್.ಎಸ್. ರಟ್ಟೀಹಳ್ಳಿ ಅವರು ಸಂವಿಧಾನ ಪೀಠಿಕೆ ಭೋಧಿಸಿದರು.

ಇದಕ್ಕೂ ಪೂರ್ವದಲ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಜಾಗೃತಿ ಜಾಥಾದ ಸ್ತಬ್ಧಚಿತ್ರ ವಾಹನ ಸ್ವಾಗತಿಸಲಾಯಿತು. ನಂತರ ಕುಂಭ ಹೊತ್ತ ಮಹಿಳೆಯರು, ಮಹಾನ್ ಪುರುಷರ ವೇಷಭೂಷಣ ಧರಿಸಿದ ಶಾಲಾ ಮಕ್ಕಳೊಂದಿಗೆ ಜಾಥಾ ಚನ್ನಮ್ಮ ಸರ್ಕಲ್ ತಲುಪಿತು. ಅಲ್ಲಿ ರಾಣಿ ಚನ್ನಮ್ಮನ ಮೂರ್ತಿಗೆ ಮಾಲಾಪಣೆ ಮಾಡಿ, ಪುರಸಭೆ ಆವರಣ ತಲುಪಿತು. ಸಾರ್ವಜನಿಕರಿಗೆ 15 ನಿಮಿಷಗಳ ಕಾಲ ಸಂವಿಧಾನದ ಮಹತ್ವದ ಕುರಿತು ವಿಡಿಯೋ ಪ್ರಸ್ತುತಪಡಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಸಿಪಿಐ ಸತ್ಯಪ್ಪ ಮಾಳಗೊಂಡ, ಜಿಲ್ಲಾ ಕೌಶಲ ಅಧಿಕಾರಿ ಹುನಿರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ, ಸಿಡಿಪಿಒ ಗಣೇಶ ಲಿಂಗನಗೌಡ್ರ, ಮಂಜುನಾಥ ಬ್ಯಾಹಟ್ಟಿ, ರಮೇಶ ವನಹಳ್ಳಿ, ಪರಶುರಾಮ ಸೊನ್ನದ, ಗೌಸಖಾನ್ ಮುನಸಿ, ಅನುರಾಧ ಮಾಳವದೆ, ಕರಿಯಪ್ಪ ಕಟ್ಟಿಮನಿ, ಹನುಮಂತ ಬಂದಿವಡ್ಡರ, ನೀಲವ್ವ ಕಾಲವಾಡ, ನಾಗರಾಜ ಹಾವೇರಿ, ಡಾ. ಮಲ್ಲೇಶಪ್ಪ ಹರಿಜನ, ರಾಮು ಪೂಜಾರ, ಬಿ.ಸಿ. ಪಾಟೀಲ, ದುರಗಪ್ಪ ಬಂಡಿವಡ್ಡರ, ಯಲ್ಲಪ್ಪ ಅಂದಲಗಿ, ಸುರೇಶ ಹರಿಜನ, ವಿರೇಶ ಕಾಳೆ, ಪುರಸಭೆ ಅಧಿಕಾರಿಗಳಾದ ಶೈಲಾ ಪಾಟೀಲ, ಎಸ್.ಎಂ. ಪಾಟೀಲ, ಪುರಸಭೆ ಸಿಬ್ಬಂದಿ, ವಿದ್ಯಾರ್ಥಿಗಳು ಇತರರಿದ್ದರು. ಶಿಕ್ಷಕರಾದ ಎಚ್.ಎಚ್. ರಟ್ಟಿಹಳ್ಳಿ ಹಾಗೂ ನಾಗಪ್ಪ ಬೆಂತೂರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net