

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಬಹು ಜಾಗರೂಕತೆಯಿಂದ ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗುವಂತಹ ಸಂವಿಧಾನವನ್ನು ರಚಿಸಿ ಜಾರಿಗೆ ತರುವಲ್ಲಿ ಯಶಸ್ವಿಯಾದರು ಎಂದು ಲೇಖಕ ಡಾ. ಕೆ.ಎಲ್. ಚಂದ್ರಶೇಖರ್ ಐಜೂರ್ ಬಣ್ಣಿಸಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಪಕ್ಷದ ಕಚೇರಿ ಇಂದಿರಾ ಭವನದಲ್ಲಿ ಆಯೋಜಿಸಿದ್ದ ದೇಶದ 75ನೇ ಸಂವಿಧಾನ ಸಮರ್ಪಣಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ರಚನೆ ಆಗಲು ಅಂಬೇಡ್ಕರ್ ಅವರು ನೇರವಾಗಿ ಆಯ್ಕೆಯಾಗಲು ಪಟ್ಟಭದ್ರ ಹಿತಾಸಕ್ತಿಗಳು ಒಪ್ಪಿಕೊಳ್ಳಲಿಲ್ಲ. ಜಾತಿಯ ಕಾರಣಕ್ಕೆ ಬಹುತೇಕ ಸಂವಿಧಾನ ರಚನಾ ಸಮಿತಿ ಸದಸ್ಯರು ಗೈರು ಹಾಜರಾಗುತ್ತಿದ್ದರು. ಇದರಿಂದ ಅಂಬೇಡ್ಕರ್ ಅವರಿಗೆ ಮುಕ್ತ ಅವಕಾಶ ದೊರೆತಂತಾಗಿ ಬಹುಜಾಗರೂಕತೆಯಿಂದ ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗುವಂತಹ ಸಂವಿಧಾನವನ್ನು ರಚಿಸಿ ಜಾರಿಗೆ ತರುವಲ್ಲಿ ಯಶಸ್ವಿಯಾದರು ಎಂದು ವಿಶ್ಲೇಷಿಸಿದರು.
ಭಾರತ ಸಂವಿಧಾನದ ಪೀಠಿಕೆಯಲ್ಲಿರುವ ಭ್ರಾತೃತ್ವ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಅಂಶಗಳು ಭಾರತದ ಜನತೆಗೆ ಅವಶ್ಯವಾಗಿ ಬೇಕಾದ ಪೂರಕ ವಾತಾವರಣವನ್ನು ನಿರ್ಮಾಣ ಮಾಡಿದ್ದಾಗಿದೆ. ಅದರನ್ವಯ ದಕ್ಷಿಣ ಆಫ್ರಿಕಾ ಸಂವಿಧಾನದ ಶೇ.60 ಭಾರತ ಸಂವಿಧಾನದ ಅಂಶಗಳೇ ಇವೆ ಎಂದರು.
ದೇಶ ಸ್ವಾತಂತ್ರ್ಯದ ಹೋರಾಟ ಸೃಷ್ಟಿಯಾಗಲು ಎರಡು ದೊಡ್ಡ ಅವಮಾನಗಳು ಕಾರಣವಾದವು. ಮೊದಲನೆಯದ್ದು 7 ಜೂನ್ 1893ರಂದು ಮಹಾತ್ಮ ಗಾಂಧೀಜಿ ಅವರಿಗೆ ಆಫ್ರಿಕಾದ ರೈಲಿನಲ್ಲಿ ಆದ ಅವಮಾನ, ಮತ್ತೊಂದು ಸತಾರದಲ್ಲಿ ಅಂಬೇಡ್ಕರ್ ಅವರಿಗೆ ಎತ್ತಿನಗಾಡಿಯವನು ಮಾಡಿದ ಅವಮಾನ ಎಂದರು.
ಈ ಎರಡು ಅವಮಾನಗಳು ಭಾರತದ ಸ್ವಾತಂತ್ರ್ಯದ ಚಳವಳಿಯ ದಿಕ್ಕನ್ನೇ ಬದಲಿಸಿದವು. ಗಾಂಧಿ ಅವರಿಗೆ ಆದ ಅವಮಾನಕ್ಕೆ ಅಲ್ಲಿಯವರು ಕ್ಷಮಾಪಣೆ ಕೇಳಿದ್ದಾರೆ. ಆದರೆ ಅಂಬೇಡ್ಕರ್ ಅವರಿಗೆ ನಮ್ಮ ನೆಲದಲ್ಲಿ ಅದ ಅವಮಾನಕ್ಕೆ ಇನ್ನು ಸಹ ಕ್ಷಮೆ ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ದೇಶದ ಸಂವಿಧಾನ ಕಟ್ಟ ಕಡೆಯ ಪ್ರಜೆಗೂ ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಭದ್ರತೆಯನ್ನು ಕೊಟ್ಟ ಪವಿತ್ರ ಗ್ರಂಥ. ಸಂವಿಧಾನವನ್ನು ತನ್ನ ಆತ್ಮವನ್ನಾಗಿಸಿಕೊಂಡು ಬಂದಿರುವ ಕಾಂಗ್ರೆಸ್ ಸದಾ ಗೌರವ ಸಲ್ಲಿಸುತ್ತಿದೆ. 1976ರಲ್ಲಿ ಇಂದಿರಾ ಗಾಂಧಿ ಅವರು ಪೀಠಿಕೆಗೆ 42ನೇ ಸಂವಿಧಾನಾತ್ಮಕ ತಿದ್ದುಪಡಿಯಂತೆ ಜಾತ್ಯತೀತ ಪದವನ್ನು ಸೇರಿಸಿದ್ದಾರೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಪಾಲಿಕೆ ಮಾಜಿ ಸದಸ್ಯ ಸುನಂದಕುಮಾರ್, ಪ್ರದೀಪ್‌ಕುಮಾರ್, ಶಾಂತಕುಮಾರಿ, ಮುಖಂಡರಾದ ಸುಶೀಲಾ ನಂಜಪ್ಪ, ಮಂಚೇಗೌಡನಕೊಪ್ಪಲು ರವಿ, ಡಿ.ಈಶ್ವರ್ ಚಕ್ಕಡಿ, ಎಂ. ಶಿವಪ್ರಸಾದ್, ಡೇರಿ ವೆಂಕಟೇಶ್, ಉತ್ತನಹಳ್ಳಿ ಶಿವಣ್ಣ ಇತರರು ಇದ್ದರು.