ಜನರ ಗಮನ ಬೇರೆಡೆ ಸೆಳೆಯಲು ಬಂಡವಾಳಶಾಹಿಗಳ ಸಂಚು

ಹುದಿಕೇರಿಯಲ್ಲಿ ಆಯೋಜಿಸಿದ್ದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎನ್.ಯು ನಾಚಪ್ಪ ಮಾತನಾಡಿದರು.  ಬೊಜ್ಜಂಗಡ ಯಸ್ಮಾ, ಚಕ್ಕೇರ ಜಾನ್ಸಿ, ಮಂದಂಗಡ ತಾರಾ, ಚಂಗುಲಂಡ ಸೂರಜ್, ಬೊಜ್ಜಂಗಡ ಸುನಿಲ್, ಕೋಳೇರ ರಾಜ, ಬೊಜ್ಜಂಗಡ ಬೋಪಣ್ಣ ಇದ್ದರು.
ಹುದಿಕೇರಿಯಲ್ಲಿ ಆಯೋಜಿಸಿದ್ದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎನ್.ಯು ನಾಚಪ್ಪ ಮಾತನಾಡಿದರು. ಬೊಜ್ಜಂಗಡ ಯಸ್ಮಾ, ಚಕ್ಕೇರ ಜಾನ್ಸಿ, ಮಂದಂಗಡ ತಾರಾ, ಚಂಗುಲಂಡ ಸೂರಜ್, ಬೊಜ್ಜಂಗಡ ಸುನಿಲ್, ಕೋಳೇರ ರಾಜ, ಬೊಜ್ಜಂಗಡ ಬೋಪಣ್ಣ ಇದ್ದರು.
Published on

ಗೋಣಿಕೊಪ್ಪ: ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಬಂಡವಾಳಶಾಹಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಮಾಜ ಸೇವೆಯ ಮುಖವಾಡ ತೊಟ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.

ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್‌ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಹುದಿಕೇರಿಯಲ್ಲಿ ಆಯೋಜಿಸಿದ್ದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಶೀಘ್ರ ತಡೆಯದಿದ್ದಲ್ಲಿ ಕೇರಳದ ವಯನಾಡು ಮಾದರಿಯ ಪ್ರಾಕೃತಿಕ ದುರಂತ ಇಲ್ಲಿಯೂ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕಪ್ಪು ಹಣವನ್ನು ಬಿಳಿ ಮಾಡಲು ಕೊಡಗಿನ ಪ್ರಕೃತಿಯ ಮೇಲೆ ದಾಳಿ ನಡೆಸಿ ರೆಸಾರ್ಟ್, ವಿಲ್ಲಾ, ಟೌನ್‌ಶಿಪ್‌ಗಳ ನಿರ್ಮಾಣಕ್ಕಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಮಾಫಿಯಾಗಳು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುತ್ತಿವೆ. ಸರ್ಕಾರದ ಕೃಪಾಕಟಾಕ್ಷದಿಂದ ಸಾವಿರಾರು ಮರಗಳು ಹನನವಾಗುತ್ತಿವೆ, ಜಲನಾಳಗಳು ನಾಶವಾಗುತ್ತಿವೆ. ಭಾರಿ ಸ್ಫೋಟಕಗಳನ್ನು ಬಳಸಿ ಭೂಗರ್ಭಕ್ಕೆ ಹಾನಿ ಮಾಡಲಾಗುತ್ತಿದೆ. ಈ ಎಲ್ಲ ಅಕ್ರಮಗಳನ್ನು ಮುಚ್ಚಿಡುವ ಉದ್ದೇಶದಿಂದ ಬಂಡವಾಳಶಾಹಿಗಳು ವಿವಿಧ ಆಮಿಷಗಳನ್ನೊಡ್ಡಿ ಸಮಾಜ ಸೇವೆಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ ನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದೆಂದು ನಾಚಪ್ಪ ಎಚ್ಚರಿಸಿದರು.

ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶ, ಭೂದೇವಿಗೆ ಇಲ್ಲ. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಬೊಜ್ಜಂಗಡ ಯಸ್ಮಾ, ಚಕ್ಕೇರ ಜಾನ್ಸಿ, ಮಂದಂಗಡ ತಾರಾ, ಚಂಗುಲಂಡ ಸೂರಜ್, ಬೊಜ್ಜಂಗಡ ಸುನಿಲ್, ಕೋಳೇರ ರಾಜ, ಬೊಜ್ಜಂಗಡ ಬೋಪಣ್ಣ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net