

ಮೈಸೂರು: ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಕಳ್ಳರಿಗೆ ಸಹಕರಿಸಿದ ಆರೋಪದ ಮೇಲೆ ಅಶೋಕಪುರಂ ಠಾಣೆ ಮುಖ್ಯಪೇದೆ ರಾಜು ಅವರನ್ನು ಅಮಾನತು ಮಾಡಲಾಗಿದೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆ ವೇಳೆ ಶ್ರೀರಂಗಪಟ್ಟಣ, ವಿದ್ಯಾರಣ್ಯಪುರಂ ಸೇರಿದಂತೆ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳು ಪತ್ತೆಯಾಗಿತ್ತು.
ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳೊಂದಿಗೆ ಅಶೋಕಪುರಂ ಠಾಣೆಯ ಮುಖ್ಯಪೇದೆ ರಾಜುವಿನ ನಂಟಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ ಕಳವು ಪದಾರ್ಥಗಳನ್ನು ಮಾರಾಟ ಮಾಡಲು ಸಹಕರಿಸಿದ್ದ ಎಂಬ ಮಾಹಿತಿಯೂ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜು ಅವರನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸರ್ಕಾರಿ ಸೇವೆಯಿಂದ ಅಮಾನತು ಮಾಡಿ, ಇಲಾಖೆ ವಿಚಾರಣೆ ಕಾಯ್ದಿಟ್ಟು ಆದೇಶ ಹೊರಡಿಸಿದ್ದಾರೆ.