ಬ್ಯಾರಿಕೇಡ್ ಮೇಲೆ ಹತ್ತಿ ಪೊಲೀಸರ ಮೇಲೆ ಬಿದ್ದ ಡಿಕೆಶಿ!

dks
Published on

ಬೆಂಗಳೂರು: 'ನ್ಯಾಷನಲ್ ಹೆರಾಲ್ಡ್' ಹೆಸರಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ವಿಚಾರಣೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ಬೆಂಗಳೂರಲ್ಲಿ ಬೃಹತ್​ ಪ್ರತಿಭಟನೆ ನಡೆಸಿದರು. ಈ ವೇಳೆ 2 ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ರಾಜಭವನ ಚಲೋ ಹೊರಟ ಕಾಂಗ್ರೆಸ್​ ಪಡೆಯನ್ನ ತಡೆಯಲು ಹಾಕಿದ್ದ ಬ್ಯಾರಿಕೇಡ್ ಮೇಲೆ ಹತ್ತಿದ ಡಿ.ಕೆ.ಶಿವಕುಮಾರ್​ ಪೊಲೀಸರ ಮೇಲೆ ಬಿದ್ದ ಪ್ರಸಂಗವೂ ನಡೆಯಿತು.

ಪ್ರಮುಖ ನಾಯಕರೆಲ್ಲ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಸಭೆ ನಡೆಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟರು. ಮಾರ್ಗಮಧ್ಯೆ ಪೊಲೀಸರಿಂದ ಬಂಧನಕ್ಕೊಳಗಾದರು. ಈ ಮುನ್ನ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಹತ್ತಿದ ಡಿ.ಕೆ.ಶಿವಕುಮಾರ್, ಪೊಲೀಸರ ಮೇಲೆ ಹಾರಿದರು.

ಇಡಿ ವಿರುದ್ಧದ ಹೋರಾಟಕ್ಕೆ ತೀವ್ರತೆ ತರುವ ಉದ್ದೇಶದಿಂದ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಎರಡು ಕಡೆ ಹಳೆಯ ಕಾರುಗಳನ್ನು ತಂದು ಬೆಂಕಿ ಇಟ್ಟ ಪ್ರಸಂಗ ನಡೆಯಿತು. ಶಾಂತಿನಗರದ ಇಡಿ ಕಚೇರಿ ಬಳಿ ಹಾಗೂ ಶೇಷಾದ್ರಿಪುರಂ ಬಳಿ 22-23 ವರ್ಷ ಹಳೆಯ ಕಾರುಗಳನ್ನು ತಂದು ಅದಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಅವರನ್ನು ಬಂಧಿಸಿದರು.

ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಸಲೀಂ ಅಹ್ಮದ್, ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್​ ನಾಯಕರ ದಂಡೇ ಸೇರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net