ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬು! ಸಚಿವರೇ ನಿಮಗೆ ಅಕ್ಕ-ತಂಗಿಯರು ಇಲ್ವಾ..?

1196667
Published on

ಬೆಂಗಳೂರು: ರಾಜಕೀಯ ಅಂದ್ರೆ ಹೀಗೀರುತ್ತೆ ಅಂತಾ ಗೊತ್ತಿದ್ದರೆ ನಾನು ರಾಜಕೀಯಕ್ಕೇ ಬರುತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.

ಬುಧವಾರ ಪತ್ನಿಯರು-ಮಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರದ ವಿಧಾನ ಪರಿಷತ್​ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಕೆಜಿಎಫ್ ಬಾಬು, ಮಗಳನ್ನು ತಬ್ಬಿಕೊಂಡು ಗಳಗಳೇ ಕಣ್ಣೀರಿಟ್ಟರು. ನನ್ನ ಹೆಂಡತಿ ಹಾಗೂ ಮಗಳು ಎಂದರೆ ನನಗೆ ಪ್ರಾಣ ಎಂದು ಗೋಳಾಡಿದರು. ಇವರ ಜತೆಗೆ ಇಬ್ಬರು ಪತ್ನಿಯರು ಮತ್ತು ಮಗಳೂ ಬಿಕ್ಕಿಬಿಕ್ಕಿ ಅಳುತ್ತಿದ್ದರು.

ಕೆಜಿಎಫ್​ ಬಾಬು ಅವರ ಮೊದಲ ಪತ್ನಿ ರುಕ್ಸಾನಾ ಮಾತನಾಡಿ, ನಾವು ಒಟ್ಟಾಗಿ ಸುಖವಾಗಿದ್ದೇವೆ ನಮ್ಮನ್ನು ಸುಮ್ಮನೆ ಬಿಟ್ಟ ಬಿಡಿ ಎಂದು ಕೈಮುಗಿದರು. ಇದಕ್ಕೆ ಧ್ವನಿಗೂಡಿಸಿದ ಎರಡನೇ ಪತ್ನಿ ಸಾಜೀಯಾ. ನನ್ನ‌ ಗಂಡ ಒಳ್ಳೆಯವರು. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಈ ತರಹ ರಾಜಕೀಯ ಇದೆ ಅಂತಾ ಗೊತ್ತಾಗಿದ್ದರೆ ನಾವಿಬ್ಬರೂ ನನ್ನ ಗಂಡನ ಕಾಲು ಹಿಡಿದುಕೊಂಡು ರಾಜಕೀಯಕ್ಕೆ ಹೋಗಲು ಬಿಡುತ್ತಿರಲಿಲ್ಲ. ನನ್ನ ಗಂಡನ ವಿರುದ್ಧ ಸಚಿವ ಸೋಮಶೇಖರ್ ಮಾಡಿರುವ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದರು.

ಮೊದಲ ಪತ್ನಿ ರುಕ್ಸಾನಾ ಮಾತನಾಡಿ, ನಾನು ನನ್ನ ಗಂಡನ ವಿರುದ್ಧ ಸುಳ್ಳು ಕೇಸ್ ಹಾಕಿದ್ದೆ. ರಾಜಿ ಮಾಡಿಕೊಂಡು ಬಾಳ್ತಾ ಇದ್ದೇನೆ. ಒಳ್ಳೆಯ ಮನಸ್ಸಿನ ವ್ಯಕ್ತಿ ನನ್ನ ಗಂಡ. ಈಗ ನಾವು ಚೆನ್ನಾಗಿ ಇದ್ದೇವೆ. ನಮ್ಮ ಮನೆಯನ್ನ ಯಾರೂ ಹಾಳು ಮಾಡಬೇಡಿ. ಸಚಿವರೇ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ನಿಮಗೆ ಅಕ್ಕ-ತಂಗಿಯರು ಇಲ್ವಾ..? ಎಂದು ಅಳುತ್ತಲೇ ಪ್ರಶ್ನಿಸಿದ್ದರು.

ಕೆಜಿಎಫ್​ ಬಾಬು ಅವರ ಮಗಳು ಉಮ್ರಾ ಮಾತನಾಡಿ, ಹಳೆಯದ್ದನ್ನು ಪ್ರಸ್ತಾಪ ಮಾಡಬೇಡಿ. ಇಲ್ಲಿಗೆ ಬಿಟ್ಟು ಬಿಡಿ. ನಿಮಗೆ ಮನವಿ ಮಾಡ್ತೇವೆ. ಯಾರು ಇದನ್ನೆಲ್ಲಾ ದೊಡ್ಡದು ಮಾಡಬೇಡಿ. ನಮಗೆ ಬದುಕಲು ಅವಕಾಶ ಕೊಡಿ ಎಂದು ಕಣ್ಣೀರಿಟ್ಟರು.

ನನಗೆ ಇಬ್ಬರು ಪತ್ನಿಯರು. ನನ್ನ ಮನೆಯಲ್ಲಿ ಕೆಲಸಕ್ಕಿದ್ದ ಸಾಜೀಯಾ ಅವರನ್ನು ಇಷ್ಟಪಟ್ಟು ಎರಡನೇ ಮದುವೆ ಆದೆ. ಆರಂಭದಲ್ಲಿ ಈ ವಿಚಾರ ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತ ನವೀದ್ ಎಂಬಾತ ನನ್ನ ಮೊದಲ ಹೆಂಡತಿಗೆ ಹೇಳಿ ಕೋರ್ಟ್​ನಲ್ಲಿ ಕೇಸ್ ಹಾಕಿಸಿದ್ದ. ನಂತರ ನಾವು ರಾಜಿ ಮಾಡಿಕೊಂಡು ಒಂದೇ ಮನೆಯಲ್ಲಿದ್ದೇವೆ. ಆದರೆ ನನ್ನ‌ ಸ್ನೇಹಿತ ಮಕ್ಕಳಿಗೆ ಬ್ರೈನ್ ವಾಷ್ ಮಾಡಿ ದೂರು ದಾಖಲಿಸಿದ್ದ ಎಂದು ಕೆಜಿಎಫ್​ ಬಾಬು ಅತ್ತರು.

ಸಾವಿರ ಕೋಟಿ ಒಡೆಯ ಹೀಗೆ ಬಿಕ್ಕಿಬಿಕ್ಕಿ ಅತ್ತಿದ್ದು ಅವರ ಮೇಲೆ ಬಂದ ಗಂಭೀರ ಆರೋಪ. ಮಗಳ ಮೇಲೆಯೇ ಕೆಜಿಎಫ್​ ಬಾಬು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಎಸ್​.ಟಿ. ಸೋಮಶೇಖರ್​ ಹೇಳಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net