

ಮೈಸೂರು: ಕಾರ್ಮಿಕರಿಗೆ ಉತ್ತಮ ಆಹಾರ, ಆರೋಗ್ಯ, ಶಿಕ್ಷಣ, ಸೇವಾ ಭದ್ರತೆ ಸೇರಿದಂತೆ ಸುಸ್ಥಿರವಾಗಿ ಬದುಕಲು ಮೂಲಸೌಕರ್ಯಗಳ ಅಗತ್ಯವಿದ್ದು, ಅದನ್ನು ಪಡೆಯಲು ನಾವು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಜೆ.ಜಯರಾಂ ಹೇಳಿದರು.
ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ, ಎಐಯುಟಿಯುಸಿ, ಎಐಸಿಸಿಟಿಯು ಜಂಟಿ ಸಮಿತಿ ವತಿಯಿಂದ ಪುರಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕ ದಿನವು ಕಾರ್ಮಿಕರ ಸ್ಥಿತಿಗತಿ ಅವಲೋಕನಕ್ಕೆ ನಮ್ಮನ್ನು ಪ್ರೇರೇಪಿಸಬೇಕು. ಸಂಕಷ್ಟಕ್ಕೆ ದೂಡುತ್ತಿರುವ ಸಂಗತಿಗಳ ನಿವಾರಣೆಗೆ ಸಿದ್ಧಗೊಳಿಸಬೇಕು. ಎಲ್ಲರಿಗೂ ಮನೆ, ಶಿಕ್ಷಣ, ಆರೋಗ್ಯ ಇರಬೇಕು. ಇದು ಮೇ ದಿನಾಚರಣೆ ಮಹತ್ವವನ್ನು ಹೇಳುತ್ತದೆ. ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಸಾಕಷ್ಟು ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
56 ಇಂಚಿನ ಎದೆ, ವಿಶ್ವಗುರು ಎಂದು ಹೊಗಳಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಮಿಕರ ದಿನಗೂಲಿಯನ್ನು 176 ರೂ.ಗೆ ನಿಗದಿ ಮಾಡುತ್ತಾರೆ. ಸಂವೇದನೆ ಇಲ್ಲದವರಿಂದ ಮಾತ್ರ ಇಂತಹ ನಿರ್ಧಾರ ಸಾಧ್ಯ. ದೆಹಲಿಯಲ್ಲಿ ಶಿಕ್ಷಣ ಹಾಗೂ ಸಮಾಜಕ್ಕಾಗಿ ಉತ್ತಮ ಕೆಲಸ ಮಾಡಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಲಾಗಿದೆ. ಇಂತಹ ಸರ್ವಾಧಿಕಾರ ಧೋರಣೆಯನ್ನು ಕಾಂಗ್ರೆಸ್ ಕಾಲದಲ್ಲೂ ವಿರೋಧಿಸಿದ್ದೇವೆ. ಇಂದು ಕೂಡ ಒಗ್ಗಟ್ಟಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದರು.