ಒಬಿಸಿ ಸ್ಥಾನ ಪಡೆಯಲು ಒಟ್ಟಾಗಿ ಪ್ರಯತ್ನ ಅಗತ್ಯ

7 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವೀರಶೈವ ಲಿಂಗಾಯತ ಸಮಾಜಕ್ಕೆ ಕೇಂದ್ರದ ಇತರ ಹಿಂದುಳಿದ ಜಾತಿ (ಒಬಿಸಿ) ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಮಾಜ ಬಾಂಧವರು ಒಗ್ಗಟ್ಟಾಗಿ ಪ್ರಯತ್ನಿಸುವುದು ಅಗತ್ಯ ಸಂಸದ ಜಗದೀಶ ಶೆಟ್ಟರ್​ ಹೇಳಿದರು.
ನಗರದ ಲಿಂಗಾಯತ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಎಲ್ಲ ಉಪಪಂಗಡಗಳ ಮುಖಂಡರು ಈ ದಿಸೆಯಲ್ಲಿ ಯತ್ನಿಸಿದರೆ ಖಂಡಿತವಾಗಿ ನಾವು ಸೌಲಭ್ಯ ಪಡೆಯಬಹುದು. ನಾನು ಮುಖ್ಯಮಂತ್ರಿಯಾಗಿದ್ದಾಗ ಸಮಾಜದ ಶಾಸಕರ ಸಹಕಾರದಿಂದ ಬಣಜಿಗ ಸಮಾಜಕ್ಕೆ 2ಎ ಸೌಲಭ್ಯ ಕೊಡಿಸಿದೆ. ಸಮಾಜದ ಪ್ರತಿಭಾವಂತ ಮಕ್ಕಳನ್ನು ಸತ್ಕರಿಸುತ್ತಿರುವುದು ಶ್ಲಾಘನೀಯ ಎಂದರು.
ವೀರಶೈವ -ಲಿಂಗಾಯತ ಸಮಾಜದ ಏಕತೆ ನಮ್ಮ ಮುಖ್ಯ ಉದ್ದೇಶ. ಲಿಂಗಾಯತ ಇತರ ಉಪ ಪಂಗಡದವರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಉಪ ಪಂಗಡದವರು ಒಟ್ಟಾಗಿದ್ದರೆ ಮಾತ್ರ ಸೌಕರ್ಯ ಪಡೆಯಲು ಸಾಧ್ಯ. ಬಣಜಿಗ ಸಮಾಜ ಬಸವಣ್ಣನ ಆದರ್ಶಗಳನ್ನು ಪಾಲಿಸುವ ಸಮಾಜ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್​ ಸದಸ್ಯ ಪ್ರೊ. ಎಸ್​.ವಿ. ಸಂಕನೂರ ಮಾತನಾಡಿದರು. ಅರುಣಕುಮಾರ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್​ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಶರಣಪ್ಪ ಕೊಟಗಿ, ಮಲ್ಲಿಕಾರ್ಜುನ ಸಾವಕಾರ, ಪ್ರೇಮಕ್ಕ ಅಂಗಡಿ, ಸವಿತಾ ಅಮರಶೆಟ್ಟಿ, ವೀರಣ್ಣ ಮಳಗಿ, ಶಿವಶಂಕರ ಹಂಪಣ್ಣವರ, ಇತರರು ಇದ್ದರು.
ಮಹಾಂತೇಶ ಗುಂಜೆಟ್ಟಿ ಸ್ವಾಗತಿಸಿದರು. ಡಾ. ವಿ.ಸಿ. ಸವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net