

ಕಡೂರು: ಕುಳುವ ಸಮಾಜದ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ನಡೆಸುವ ಅಗತ್ಯವಿದೆ ಎಂದು ಕುಳುವ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ್ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಳುವ ಜನಾಂಗ ಶೈಕ್ಷಣಿಕ, ಆರ್ಥಿಕವಾಗಿ ಬಹು ಹಿಂದುಳಿದಿದೆ. ಜನಾಂಗ ಅಭಿವೃದ್ಧಿಯಾಗಬೇಕಾದರೆ ವಚನಕಾರ ನುಲಿಯ ಚಂದಯ್ಯ ನವರ ಆದರ್ಶಗಳ ಪಾಲನೆಯಾಗಬೇಕು ಎಂದರು.
ಸಮಾಜ ಒಗ್ಗಟ್ಟಾಗಿ ಸಂಘಟನೆಯಾಗಬೇಕು. ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿ ಚಿಂತನೆ ನಡೆಸಬೇಕು. ಸರ್ಕಾರ ನುಲಿಯ ಚಂದಯ್ಯನವರ ಹೆಸರಲ್ಲಿ ಕಾಯಕ ಶ್ರೀ ಪ್ರಶಸ್ತಿ ನೀಡಲು ಮುಂದಾಗಬೇಕು. ಕುಳುವ ಜನಾಂಗಕ್ಕೆ ಸರ್ಕಾರಿ ಸೌಲಭ್ಯಗಳು ದೊರೆಕಿಸಿಕೊಡಲು ಎಲ್ಲರ ಸಹಕಾರ ನೀಡಬೇಕು ಎಂದರು.
ನಂದಿ ಮಠದ ಶ್ರೀ ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನುಲಿಯ ಚಂದಯ್ಯ ಅವರು ಜೀವನಾನುಭವವನ್ನು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಅದು ಒಂದು ಸಮುದಾಯಕ್ಕೆ ಸೀಮಿತವಲ್ಲ. ಸರ್ವ ಸಮಾಜಕ್ಕೂ ಅವರ ವಚನಗಳು ಪ್ರಸ್ತುತವಾಗಿವೆ ಎಂದರು.
ತಹಸೀಲ್ದಾರ್ ಪೂರ್ಣಿಮಾ, ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಟಿ.ಮೂರ್ತಿ, ಗೋವಿಂದಸ್ವಾಮಿ, ಯೋಗ ಶಿಕ್ಷಕ ನವೀನ್ ಕುಮಾರ್, ರಾಜಪ್ಪ ಕೊರಚರಹಟ್ಟಿ, ದಾನಪ್ಪ, ಸುಂಕಪ್ಪ, ಪಾರ್ವತಿನಗರ ರಮೇಶ್ ಇದ್ದರು.