

ಶೃಂಗೇರಿ: ಭಾರತ ಸಂವಿಧಾನ ಒಂದು ವಿಶಿಷ್ಟ ಹಾಗೂ ಬೃಹತ್ ಸಂವಿಧಾನವಾಗಿದ್ದು, ಇದರ ಪೂರ್ವ ತಯಾರಿಗಾಗಿ ಅನೇಕ ಘಟನೆ ಘಟಿಸಿದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿ.ಆರ್.ಗಂಗಾಧರಪ್ಪ ಹೇಳಿದರು.
ವಿದ್ಯಾನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನಲಿ ಕಲಿ ತರಬೇತಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚನಾ ಸಮಿತಿ ಅಧ್ಯಕ್ಷತೆಯಲ್ಲಿ ಹೊರ ಬಂದ ಲಿಖಿತ ಸಂವಿಧಾನವು ನಮ್ಮ ಸ್ವಾತಂತ್ರ ಭಾರತದ ಆಡಳಿತ ವ್ಯವಸ್ಥೆ ಹಾಗೂ ಜನ ಸಾಮಾನ್ಯರಿಗೆ ಅನ್ವಯಿಸಲ್ಪಡುವ ಹಕ್ಕು ಮತ್ತು ಕರ್ತವ್ಯ ಒಳಗೊಂಡ ಬೃಹತ್ ಗ್ರಂಥವಾಗಿದೆ ಎಂದರು.
ಶಿಬಿರಾರ್ಥಿ ನಾಗರಾಜ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಪಾಠ ಬೋಧನೆಯಲ್ಲೂ ಹೊಸತನ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡಲ್ಲಿ ಶಿಕ್ಷಕ ಪರಿಣಾಮಕಾರಿಯಾಗಿ ಬೋಧನೆ ಮಾಡಬಹುದು. ಮಕ್ಕಳನ್ನು ನಾಳಿನ ಸ್ಪರ್ಧಾತ್ಮಾಕ ಜಗತ್ತಿಗೆ ಅಣಿಗೊಳಿಸಲು ತರಬೇತಿ ಅಗತ್ಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಐದು ದಿನದ ತರಬೇತಿ ನಡೆಯಿತು. ನಾಲ್ವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು. ವಿನಯಕುಮಾರ್, ಕೃಷ್ಣ, ಮಂಜುನಾಥ್, ಗಜೇಂದ್ರ, ಮಾಲಾ, ರಾಜಾನಾಯ್ಕ, ಶಶಿಕಲಾ ಇದ್ದರು.