

ಹರಿಪ್ರಸಾದ್ ನಂದಳಿಕೆ ಕಾರ್ಕಳ
ತುಳುನಾಡಿನ ದೈವರಾಧನೆ ಹಾಗೂ ಕಾರಣಿಕ ದೈವದ ಪವಾಡಗಳು ಜಗದ್ವಿಖ್ಯಾತವಾಗಿದ್ದು, ಈ ನಡುವೆ ಕಾರ್ಕಳದಲ್ಲಿ ಬಾಲಕನೊಬ್ಬ ದೈವನರ್ತನ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕರಾವಳಿ ಭಾಗದ ಮನೆಮಾತಾಗಿದ್ದಾನೆ.
ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಡ್ಲಿ ಎಂಬಲ್ಲಿ ಪ್ರತಿ ವರ್ಷವೂ ಶ್ರೀ ಮೊಗೇರ್ಕಳ ದೈವದ ನೇಮೋತ್ಸವ ನಡೆಯುತ್ತದೆ. ಗುರುವಾರ ನಡೆದ ನೇಮೋತ್ಸವದಲ್ಲಿ ಸಮರ್ಥ್ ಎಂಬ ಬಾಲಕ ತನಿಮಾನಿಗ ದೈವಕ್ಕೆ ನರ್ತನ ಸೇವೆ ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದಾನೆ.
ಶ್ರೀ ಮೊಗೇರ್ಕಳ ದೈವಸ್ಥಾನ ಮೊಗೇರ ಸಮುದಾಯಕ್ಕೆ ಸೇರಿದ್ದು, ಸಮರ್ಥ್‌ನ ಅಜ್ಜ ಮೋನು ಪಾಣರರು ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ದೈವದ ಚಾಕರಿ ಮಾಡಿಕೊಂಡಿದ್ದರು. ಅವರ ಪುತ್ರ ಹರೀಶ ಧರ್ಮರಸು ದೈವದ ಕೋಲ ಕಟ್ಟುತ್ತಿದ್ದು, ಉತ್ತರಾಧಿಕಾರಿಯಾಗಿ ಸಮರ್ಥ್ ಈಗಲೇ ಸೇವೆಗಿಳಿದಿದ್ದಾನೆ. ಅನುಭವಿ ದೈವನರ್ತಕರಿಗೆ ಸಮಾನವಾಗಿ ನರ್ತಿಸಿದ್ದು, ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧಗೊಳಿಸಿದೆ.
ಸಮರ್ಥ್ ಸೂಡಿ ಸರ್ಕಾರಿ ಶಾಲೆಯ 6ನೇ ತರಗತಿಯಲ್ಲಿ ಕಲಿಯುತ್ತಿದ್ದು, ತನ್ನ ಅಜ್ಜ ಹಾಗೂ ತಂದೆಯಿಂದ ದೈವನರ್ತನವನ್ನು ಕಲಿತಿದ್ದಾನೆ. ದೈವಾರಾಧನೆ, ಧಾರ್ಮಿಕ ವಿಚಾರಗಳಿಂದ ದೂರವಾಗುತ್ತಿರುವ ಇಂದಿನ ಮಕ್ಕಳ ನಡುವೆ ಸಮರ್ಥ್ ದೈವಾರಾಧನೆಯಲ್ಲಿ ಆಸಕ್ತಿ ಉಳಿಸಿಕೊಂಡಿದ್ದು, ಪರಂಪರೆ ಹಾಗೂ ಸಂಸ್ಕೃತಿ ಜೀವಂತವಿದೆ ಎಂಬುದಕ್ಕೆ ಉದಾಹರಣೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ನೆಲದ ಸಂಸ್ಕೃತಿ ಆಚಾರ ವಿಚಾರ ಉಳಿಯಬೇಕಾದರೆ ಯುವ ಪೀಳಿಗೆ ಕಡ್ಡಾಯವಾಗಿ ಸಂಸ್ಕೃತಿ ಅರಿತುಕೊಳ್ಳಬೇಕು. ಇದೊಂದು ಖುಷಿಯ ಬೆಳವಣಿಗೆಯಾಗಿದ್ದು, ಇದು ಮುಂದುವರಿದರೆ ಭವಿಷ್ಯತ್ತಿನಲ್ಲೂ ಕಲೆ, ಪರಂಪರೆ ಹಾಗೂ ಸಂಸ್ಕೃತಿಗೆ ಉಳಿಗಾಲವಿದೆ. -ಎಸ್.ಕೆ ಸಾಲಿಯಾನ್ ಪಡಿಬೆಟ್ಟು ಬರ್ಕೆ ಮನೆತನದವರು ತಾತ ಹಾಗೂ ನನ್ನ ತಂದೆ ಮಾಡುತ್ತಿದ್ದ ದೈವದ ಸೇವೆ ನೋಡಿ ಕಲಿತುಕೊಂಡು ದೈವರಾಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಿರಿಯರು ಹಾಕಿಕೊಟ್ಟ ಹೆಜ್ಜೆಯಲ್ಲೇ ದೈವದ ಸೇವೆ ಮಾಡುತ್ತಿದ್ದು, ತುಂಬಾ ಖುಷಿ ನೀಡಿದೆ. -ಸಮರ್ಥ್, ಬಾಲ ದೈವ ನರ್ತಕ https://www.vijayavani.net/service-to-the-youth-is-a-symbol-of-eternal-culture https://www.vijayavani.net/health-shield-day-celebrated-in-kota