

ಶಿಕಾರಿಪುರ: ಹಾಲುಮತ ಸಮಾಜವೆಂದರೆ ಅತ್ಯಂತ ಸ್ವಾಭಿಮಾನಿ, ಪರಿಶ್ರಮಿ, ಶೌರ್ಯ ಮತ್ತು ಸಹೃದಯಿ ಸಮಾಜ. ಅಂತಹ ಶ್ರೇಷ್ಠ ಸಮಾಜದಿಂದ ನಾವು ಬಂದಿದ್ದೇವೆ ಎನ್ನುವುದೇ ನಮಗೆ ಹೆಮ್ಮೆ ಎಂದು ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.
ಪಟ್ಟಣದಲ್ಲಿ ಶನಿವಾರ ಶ್ರೀ ಕನಕ ಚಾರಿಟಬಲ್ ಟ್ರಸ್ಟ್, ಹಾಲುಮತ ಸಮಾಜದಿಂದ ಸನ್ಮಾನ ಸ್ವೀಕರಿ ಮಾತನಾಡಿ, ನಮ್ಮ ಸಮುದಾಯ ನೀಡಿದ ಪ್ರಶಸ್ತಿಯಿಂದ ಅತ್ಯಂತ ಸಂತೋಷವಾಗಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನ ಕುಟುಂಬ ನನಗೆ ಪ್ರಶಸ್ತಿ ನೀಡಿ ಗೌರವಿಸಿದಂತಹ ಅನುಭವವಾಗಿದೆ. ಈ ದಿನ ನನ್ನ ಪಾಲಿಗೆ ಸುದಿನ ಎಂದೇ ಭಾವಿಸುತ್ತೇನೆ. ವ್ಯಕ್ತಿಗಿಂತ ಸಮುದಾಯ ದೊಡ್ಡದು. ನಮ್ಮ ಸಮುದಾಯ ನನ್ನನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಗುರುತಿಸಿ ಗೌರವಿಸಿದೆ. ಸಮಾಜದ ಬಂಧುಗಳ ಅಭಿಮಾನಕ್ಕೆ ನಾನು ಯಾವತ್ತೂ ಋಣಿಯಾಗಿದ್ದೇನೆ ಎಂದರು.
ಟ್ರಸ್ಟ್‌ನ ಗೌರವಾಧ್ಯಕ್ಷ ನಗರದ ಅಶೋಕ್ ಮಾತನಾಡಿ, ನಗರದ ಮಹದೇವಪ್ಪ ಅವರು ನಮ್ಮ ಸಮಾಜದ ಅತ್ಯಂತ ಹಿರಿಯ ಹಾಗೂ ಸಹೃದಯಿ ರಾಜಕಾರಣಿ. ಅವರಿಗೆ ಕಾಗಿನೆಲೆ ಕನಕಗುರು ಪೀಠದ ಶ್ರೀಗಳಿಂದ ಹಾಲುಮತ ಚೇತನ ಪ್ರಶಸ್ತಿ ಲಭ್ಯವಾಗಿದೆ. ಅವರೊಬ್ಬ ಅಧ್ಯಯನಶೀಲ ರಾಜಕಾರಣಿ. ಸಮುದಾಯದ ಕಾರ್ಯದಲ್ಲಿ ಅವರು ಯಾವತ್ತೂ ಹಿಂದೆ ಬಿದ್ದಿಲ್ಲ. ಇಳಿ ವಯಸ್ಸಿನಲ್ಲೂ ಅವರು ಉತ್ಸಾಹಿಗಳಾಗಿದ್ದಾರೆ. ಚಟುವಟಿಕೆಯಿಂದ ಇದ್ದಾರೆ. ಯುವಕರಿಗೆ ಮಾದರಿಯಾಗಿದ್ದಾರೆ. ಅವರನ್ನು ಗೌರವಿಸಲು ಸಂತೋಷವೆನಿಸುತ್ತದೆ ಎಂದು ಹೇಳಿದರು.
ಪ್ರಮುಖರಾದ ಹೊನ್ನೂರ್ ಮಹಾಲಿಂಗಪ್ಪ, ಸಿರಗಂಬಿ ಗಿಡ್ಡಪ್ಪ, ಸಿ.ಎಸ್.ಸುರೇಶ್, ಬಾಳೆಕಾಯಿ ಮಂಜುನಾಥ್, ಚೂರಿ ಗಿಡ್ಡಪ್ಪ. ಬಿ.ಎಸ್.ಗುಡದಯ್ಯ, ಮಾಯಪ್ಪ, ರಾಧಾಕೃಷ್ಣ, ಅಜಯ್ ಕಂಚಗಾರ್, ಎಚ್.ಎಂ.ರಾಜೇಂದ್ರ ಇತರರಿದ್ದರು.