

ಬೆಂಗಳೂರು: ಕನ್ನಡ ಚಿತ್ರರಂಗದ ಹಾಸ್ಯನಟ ಚಿಕ್ಕಣ್ಣ ಅವರು ಕ್ಷೇಮವಾಗಿದ್ದಾರೆ. ಈ ಬಗ್ಗೆ ಸ್ವತಃ ಚಿಕ್ಕಣ್ಣ ಅವರೇ ಸಿನಿಮಾ ಚಿತ್ರೀಕರಣ ಸ್ಥಳದಿಂದಲೇ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
'ಕಾಮಿಡಿ ಕಿಂಗ್ ಚಿಕ್ಕಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ' ಎಂಬ ಸುಳ್ಳು ಸುದ್ದಿಯನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಈ ಸುದ್ದಿ ಕೇಳಿ ಚಿಕ್ಕಣ್ಣರ ಅಭಿಮಾನಿಗಳ ಮನದಲ್ಲಿ ಆತಂಕ ಮೂಡಿತ್ತು.
ಇದನ್ನು ಅಲ್ಲಗಳೆದ ಚಿಕ್ಕಣ್ಣ, 'ನನಗೆ ಏನು ಆಗಿಲ್ಲ... ಆರೋಗ್ಯ ಸರಿಯಾಗಿದೆ. ಸದ್ಯ 'ಉಪಾಧ್ಯಕ್ಷ' ಸಿನಿಮಾ ಶೂಟಿಂಗ್ನಲ್ಲಿ ಇದ್ದೇನೆ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಥ್ಯಾಂಕ್ಸ್ ಕಣ್ರಪ್ಪ ನಿಮಗೆ' ಎಂದು ಹಾಸ್ಯಮಯವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಚಿಕ್ಕಣ್ಣರ ಮಾತು ಕೇಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.