ಬಾನಲ್ಲಿ ಹಾರದಿ ಬಣ್ಣಬಣ್ಣ ಗಾಳಿಪಟ

7-KGL-3
ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿಇ ಜೂನಿಯರ್ ಕಾಲೇಜು ಮೈದಾನದಲ್ಲಿ ಪಟದ ಹಬ್ಬದ ಹಿನ್ನೆಲೆಯಲ್ಲಿ ಸಾವಿರರು ಸಂಖ್ಯೆಯಲ್ಲಿ ಜನರು ಪಟ ಹಾರಿಸಿ ಸಂಭ್ರಮಿಸಿದರು.
Published on

ಕೊಳ್ಳೇಗಾಲ: ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಬಣ್ಣಬಣ್ಣ ಗಾಳಿಪಟಗಳ ಕಲರವ ಕಣ್ಮನ ಸೆಳೆಯಿತು.

ಆಷಾಢ ಗಾಳಿ ಕಾಲದಲ್ಲಿ ಪಟದ ಹಬ್ಬ ಆಚರಣೆ ಮಾಡುವುದು ವಾಡಿಕೆ. ಅಂತೆಯೇ, ಪ್ರತಿ ವರ್ಷದಂತೆ ಈ ವರ್ಷವು ಕೊಳ್ಳೇಗಾಲ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನರು ಮಕ್ಕಳು ಹಾಗು ಕುಟುಂಬದ ಜತೆಗೂಡಿ ಗಾಳಿಪಟಗಳನ್ನು ಬಾನಂಗಳಕ್ಕೆ ಹಾರಿ ಬಿಟ್ಟು ಸಂಭ್ರಮಿಸಿದರು.

ಸಾವಿರಾರು ಸಂಖ್ಯೆಯ ಜನರು ಒಂದೆಡೇ ತಾವು ತಂದ ಪಟಗಳನ್ನು ಹಾರಿಸಿದರು. ಪಟಗಳು ಬಾನೆ ತ್ತರಕ್ಕೆ ಹಾರಿ ಎಲ್ಲರನ್ನು ಆಕರ್ಷಿಸಿತು. ಕೆಲ ದೊಡ್ಡ ಗಾತ್ರದ ಗಾಳಿ ಪಟಗಳನ್ನು ಮೇಲೇರಿಸಲು ಹರ ಸಾಹಸ ಪಡುವುದು. ಕೆಲ ಪಟಗಳು ಸೂತ್ರ, ಬಾಲಂಗೋಚಿ ವ್ಯತ್ಯಾಸಗಳಿಂದ ರಾಟೆಯಂತೆ ತಿರುಗಿ ಪದೇಪದೆ ಬೀಳುತ್ತಿರುವುದು ಕಂಡು ಬಂತು. ಪಟದ ಹಬ್ಬಕ್ಕೆ ವಾತಾವರಣವೂ ಕೂಡ ಸಾಥ್ ನೀಡಿತು.

ಚಿತ್ರ ನಟ ಡಾ.ವಿಷ್ಣುವರ್ಧನ್, ಶಂಕರ್ ನಾಗ್, ಕಿಚ್ಚ ಸುದೀಪ್, ಚಾಲೆಂಜಿಗ್ ಸ್ಟಾರ್ ದರ್ಶನ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಇತ್ಯಾದಿ ಸ್ಟಾರ್ ನಟರ ಭಾವಚಿತ್ರವುಳ್ಳ ಪಟವನ್ನು ಅಂಟಿಸಿ ಹಾರಿಬಿಟ್ಟರು. ಚಿಣ್ಣರು ಡ್ರ್ಯಾಗನ್, ಸ್ಪೈಡರ್‌ಮನ್, ಕಾಮನ ಬಿಲ್ಲು ವಿವಿಧ ಮಾದರಿಯ ಪಟಗಳನ್ನು ಹಾರಿಸಿದರು.

ಕೆಲವು ಪಟಗಳು ನಿರೀಕ್ಷೆಯಂತೆ ಹಾರಿದವು. ಕೆಲವು ಹಾರದ ಕಾರಣ ಯುವಕರು ಅತ್ತಿಂದಿತ್ತ ಓಡಿ ಪಟ ಹಾರಿಸಲು ಸತತ ಪ್ರಯತ್ನದಲ್ಲಿದ್ದರು. ಈ ಕ್ಷಣವನ್ನು ತಾಲೂಕು ಸೇರಿದಂತೆ ಪಟ್ಟಣದ ವಿವಿಧೆಡೆಯಿಂದ ಸಾವಿರಾರು ಜನರು ಕಣ್ತುಂಬಿಕೊಂಡರು. ಮೈದಾನದಲ್ಲಿ ಇಡಲಾಗಿದ್ದ ಪಾನಿಪುರಿ, ಚಿರುಮುರಿ, ಐಸ್‌ಕ್ರೀಮ್ , ಕಬ್ಬಿನ ಹಾಲು, ಇನ್ನಿತರ ತಿಂಡಿ ತಿನಿಸುಗಳನ್ನು ಸವಿದರು. ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪಟದ ಹಬ್ಬ ವಿಶೇಷ: ಆಷಾಢದ ಏಕಾದಶಿ ಮಾರನೇ ದಿನವಾದ ದ್ವಾದಶಿ ಪ್ರಯುಕ್ತ ಈ ಪಟದ ಹಬ್ಬ ಆಚರಣೆ ಮಾಡಲಾಗುತ್ತದೆ. ಮರಡಿ ಗುಡ್ಡದ ಮಹದೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯುತ್ತದೆ. ಪಟ್ಟಣ ಸುತ್ತಮುತ್ತಲ ಸಾವಿರಾರು ಜನರು ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಾರೆ. ನವ ಜೋಡಿ ಪಟದ ಹಾರಿಸುವ ಸಂಭ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net