ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರ್ಣರಂಜಿತ ಚಾಲನೆ

mysore
Published on

ಮೈಸೂರು: ಶಾಸ್ತ್ರೀಯ ನೃತ್ಯ, ಸಂಗೀತ, ಗಾನಾಮೃತವನ್ನೇ ಉಣಬಡಿಸುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರ್ಣರಂಜಿತ ಚಾಲನೆ ದೊರೆಯಿತು.

ವಿಶ್ವವಿಖ್ಯಾತ ಅರಮನೆ ವೇದಿಕೆಯಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಕ್ಷಣ ಅರಮನೆಗೆ ಅಳವಡಿಸಿರುವ ಸಹಸ್ರಾರು ದೀಪಗಳು ಪ್ರಜ್ವಲಿಸುವ ಮೂಲಕ ಶುಭ ಕೋರಿದವು.

ಅರಮನೆಯ ಪಡುವಣ ದಿಕ್ಕಿನಿಂದ ಬೀಸುತ್ತಿದ್ದ ತಂಗಾಳಿಗೆ ಮೈವೊಡ್ಡಿ ಕುಳಿತ ಸಭಿಕರು ಈ ಘಳಿಗೆಯನ್ನು ಸಾಕ್ಷಿಕರಿಸಿದರು. ವೇದಿಕೆಯ ಬಲ ಬದಿಯಲ್ಲಿ ಅಳವಡಿಸಿದ್ದ ಸೈಕಲ್ ಬ್ರ್ಯಾಂಡ್‌ನ ಆರು ಅಡಿ ಎತ್ತರದ ಅಗರ್‌ಬತ್ತಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊತ್ತಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜರ ಕಾಲದಿಂದಲೂ ಕಲೆ, ಸಂಗೀತ, ನೃತ್ಯಕ್ಕೆ ಪ್ರೋತ್ಸಾಹ ದೊರೆತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಇನ್ನಷ್ಟು ಉತ್ತೇಜನಕೊಟ್ಟು ಸಾಂಸ್ಕೃತಿಕ ಲೋಕ ಬೆಳೆಯಲು ಅವಕಾಶ ಕೊಟ್ಟರು. ಮೈಸೂರು ಸಾಂಸ್ಕೃತಿಕ ನಗರಿ ಆಗಲು ರಾಜಮನೆತನ ಕಾರಣ. ಅದನ್ನೇ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ. ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಸಾಧಕರ ಗುರುತಿಸಿ ಗೌರವಿಸುವುದು ಸರ್ಕಾರದ ಕರ್ತವ್ಯ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸಾಂಸ್ಕೃತಿಕ ಕಲೆಗಳು ದೇಶದ ಆಸ್ತಿ. ಅವುಗಳನ್ನು ಉಳಿಸುವ ಪ್ರಯತ್ನಗಳು ಆಗಬೇಕು. ರಾಜ್ಯ ಸರ್ಕಾರ ಸಹ ರಾಜಕೀಯ, ಧರ್ಮ-ಜಾತಿಯನ್ನು ಬದಿಗೆ ಇಟ್ಟು ಅರ್ಹ ಕಲಾವಿದರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲು ಸಮಿತಿ ರಚನೆ ಮಾಡಿದೆ ಎಂದರು.

ಮೈಸೂರಿನವರು ಭಾಗ್ಯವಂತರು. ಇಲ್ಲಿ ಕಲೆಗಳ ಆರಾಧನೆಯೇ ನಡೆಯುತ್ತದೆ. ದಸರಾದಲ್ಲಿ ಕಲೆಗಳ ಎಲ್ಲ ಸಾರವೂ ಕುಳಿತಲ್ಲೇ ದೊರೆಯುತ್ತದೆ. ಏನು ಬೇಕೋ ಅದೆಲ್ಲವೂ ಇಲ್ಲಿಯೇ ಸಿಗುತ್ತದೆ. ದೇಶ-ವಿದೇಶ ಕಲಾವಿದರು ಬಂದು ತಮ್ಮ ಸಾಂಸ್ಕೃತಿಕ ಕಛೇರಿಯನ್ನು ನಡೆಸಿಕೊಡುತ್ತಾರೆ. ಇದನ್ನೆಲ್ಲ ಆಸ್ವಾದಿಸಬೇಕು ಎಂದು ಹೇಳಿದ ಅವರು ಪುರಂದರದಾಸರ ಪದವನ್ನು ಉಲ್ಲೇಖಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ದಸರಾ ಎಂದರೆ ಮೈಸೂರು. ಮೈಸೂರು ಎಂದರೆ ದಸರಾ. ವಿಜಯನಗರ ಅರಸರು ಪ್ರಾರಂಭಿಸಿದ ದಸರಾ ಉತ್ಸವ ಇದೀಗ ಮೈಸೂರಿನಲ್ಲಿ ಜನಮಾನಸವನ್ನೂ ಸೂರೆಗೊಳಿಸಿದೆ ಎಂದು ಹೇಳಿದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಟಿ.ಎಸ್.ಶ್ರೀವತ್ಸ, ಡಿ.ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಐಜಿಪಿ ಡಾ.ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net