

ವಿಜಯಪುರ: ನಮ್ಮ ಸುತ್ತ ನಿತ್ಯ ನಡೆಯುವ ನೈಜ ಟನೆಗಳು, ಮನೆಯಲ್ಲಿನ ಸಣ್ಣ ಪುಟ್ಟ ಸಂಭ್ರಮಗಳು, ಗಂಟಲುಬ್ಬಿ ಬರುವ ನೋವಿನ ಬಿಕ್ಕಳಿಕೆಗಳು, ನಮ್ಮವೇ ಸಮಸ್ಯೆಗಳು, ಆಶಯ ಮತ್ತು ಹತಾಶೆಗಳು ಕಥಾವಸ್ತುಗಳಾಗಿ ನಮಗೆ ಗಮನ ಸೆಳೆಯುತ್ತವೆ ಎಂದು ಸಾಹಿತಿ ದಾಾಯಿಣಿ ಬಿರಾದಾರ ಹೇಳಿದರು.
ನಗರದ ಬ್ಯಾಂಕರ್ಸ್ ಕಾಲನಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಾ. ಎಂ.ಎಸ್. ಮಾಗಣಗೇರಿ ಕುಟುಂಬದಿಂದ ಭಾನುವಾರ ನಡೆದ ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ತಾಳಿಕೋಟೆಯ ಸವಿತಾ ಆರ್. ಇನಾಮದಾರ ಅವರ "ಅರ್ಧ ನೆನಪು ಅರ್ಧ ಕನಸು' ಕಥಾ ಸಂಕಲನ ಪರಿಚಯಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟದ ಕಥೆಗಳ ಭಾಷೆ ವಿಶೇಷವಾಗಿದೆ. ಇಲ್ಲಿನ ಭಾಷೆಯ ಲಯವನ್ನು ಸಮರ್ಥವಾಗಿ ಬಳಸುವುದರೊಂದಿಗೆ ಪ್ರಾದೇಶಿಕ ಅಸ್ಮಿತೆ ಪ್ರತಿಷ್ಠಾಪಿಸಿ ಸೂಕ್ಷ್ಮ ಭಾವನೆಗಳಿಗೆ ಈ ಭಾಗದ ಭಾಷೆ ಮತ್ತದರ ನುಡಿಗಟ್ಟುಗಳು ಸಮರ್ಥವಾಗಿವೆ ಎಂಬುದನ್ನು ಇಲ್ಲಿ ಸಾಕ್ಷೀಕರಿಸಿದ್ದಾರೆ.
ಇಲ್ಲಿನ ಕತೆಗಳು ಯಾವುದೋ ಕಲ್ಪನೆಯ ದಂತಗೋಪುರಗಳಲ್ಲಿ ಕುಳಿತು ಕಾಲೇಪಕ್ಕಾಗಿ ಹೇಳಿಕೊಂಡ ರಮ್ಯವಾದ ಸಂಗತಿಗಳಲ್ಲ. ಗ್ರಾಮ್ಯ ಪರಿಸರದಲ್ಲಿಯೇ ಒಡಮೂಡಿ ಆಕೃತಿ ತಾಳುವ ಈ ಕಥೆಗಳು ಹಳ್ಳಿಯ ಬದುಕಿನ ಬವಣೆ, ಛಲ, ಸೇಡು, ಅಸಹಾಯಕತೆ ಮತ್ತು ಧೈರ್ಯವನ್ನು ತೆರೆದಿಡುತ್ತವೆ ಎಂದರು.
ಅಧ್ಯಕ್ಷತೆ ವಹಸಿದ್ದ ಸಾಹಿತಿ ಸುಭಾಷ ಯಾದವಾಡ ಮಾತನಾಡಿ, ಕಥೆ ಕಟ್ಟುವುದೂ ಒಂದು ಕಲೆ. ಬದುಕಿನ ಅನುಭವಗಳ ಸುರಳಿಯನ್ನು ಬಿಚ್ಚಿ ಕಾಲ ಗರ್ಭದ ಸತ್ಯಾಸತ್ಯತೆಗಳ ಅನಾವರಣ ಮಾಡುವುದು ಕಥೆಗಳ ಮುಖ್ಯ ಧ್ಯೇಯ ಎಂದರು.
ಅರ್ಜುಣಗಿಯ ಸರ್ಕಾರಿ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸವಿತಾ ಝಳಕಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ನಾಗೇಶ್ ಶೆಟ್ಟಿ ಮತ್ತು ಓಂ ಸಾಯಿ ಯೋಗ ಅಕಾಡೆಮಿ ಅಧ್ಯಕ್ಷೆ ಕೀರ್ತಿ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾವಡಿ ಬಳಗದ ಅಧ್ಯಕ್ಷ ಬಿ.ಆರ್. ಬನ್ಸೋಡೆ ವೇದಿಕೆಯಲ್ಲಿದ್ದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಪಠ್ಯಪುಸ್ತಕಗಳ ರಚನಾ ಸಮಿತಿಗೆ ಉತ್ತರ ಕರ್ನಾಟಕ ಭಾಗದ ಸದಸ್ಯರಾಗಿ ಆಯ್ಕೆಯಾದ ಡಾ. ಎಸ್.ಟಿ. ಮೇರವಾಡೆ ಅವರನ್ನು ಸನ್ಮಾನಿಸಲಾಯಿತು.
ಓದುಗರ ಚಾವಡಿಯ ಸಂಚಾಲಕ ಶರಣು ಸಬರದ, ಡಾ. ವಿ.ಡಿ. ಐಹೊಳ್ಳಿ, ಡಾ. ಉಷಾದೇವಿ ಹಿರೇಮಠ, ಪ್ರಭಾವತಿ ದೇಸಾಯಿ, ಪ್ರೊ. ಎಂ.ಎಸ್. ಝಳಕಿ, ರಮೇಶ ಚವಾಣ, ಸಂಗಮೇಶ ಮೇತ್ರಿ, ಡಾ. ರಾಜಕುಮಾರ ಜೊಲ್ಲೆ, ಮನು ಪತ್ತಾರ ಕಲಕೇರಿ, ಶಿವಶರಣಪ್ಪ ಶಿರೂರು, ಜಿ.ಸಿ. ಹಿರೇಮಠ, ರಮೇಶ ತೇಲಿ, ಶ್ರೀಧರ ಪತ್ತಾರ, ರವೀಂದ್ರ ಝಳಕಿ, ಅಮರೇಶ ಸಾಲಕ್ಕಿ, ಸುಭಾಷಚಂದ್ರ ಕನ್ನೂರ, ಶರಣಗೌಡ ಪಾಟೀಲ, ಮಯೂರ ತಿಳಗೂಳಕರ, ಡಾ. ಶಶಿಧರ ಶಿರಹಟ್ಟಿ, ಸೋಮಶೇಖರ ಕುರ್ಲೆ ಮತ್ತಿತರರಿದ್ದರು.
ಶ್ರೀನಿಧಿ ಮಾಗಣಗೇರಿ ಪ್ರಾರ್ಥಿಸಿದರು. ಬಸವರಾಜ ಕುಂಬಾರ ನಿರೂಪಿಸಿ ವಂದಿಸಿದರು.