

ಸವಣೂರ: ಅನೇಕ ಹರಿದಾಸರಿಂದ ರಚನೆಗೊಂಡಿರುವ ಸಾಹಿತ್ಯದ ಪ್ರಮುಖ ಪ್ರಕಾರವಾದ ‘ಹರಿದಾಸರ ಮುಂಡಿಗೆ’ಗಳ ಸಂಗ್ರಹ ಕೃತಿ ಶೀಘ್ರದಲ್ಲಿ ಮುದ್ರಣವಾಗಲಿದೆ ಎಂದು ಪ್ರಕಾಶಕ ಜಯತೀರ್ಥ ದೇಶಪಾಂಡೆ ತಿಳಿಸಿದರು.
ಪಟ್ಟಣದ ಶ್ರೀ ಸತ್ಯಬೋಧ ಮೂಲವೃಂದಾವನ ಸನ್ನಿಧಿಯಲ್ಲಿ ಯುಗಾದಿ ಪ್ರತಿಪದೆಯಂದು ಶ್ರೀ ಸತ್ಯಬೋಧ ಗುರುರಾಜ ಭಜನಾಮೃತ ಕೃತಿಯ 6ನೇ ಮುದ್ರಣದ ಆವೃತ್ತಿಯ ಬಿಡುಗಡೆ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು. ಹರಿದಾಸರ ಮುಂಡಿಗೆಗಳ ಸಂಗ್ರಹವನ್ನು ಹರಿದಾಸರಾಗಿದ್ದ ದಿ. ಕೇಶವದಾಸ ದೇಶಪಾಂಡೆ ಅವರು ಕೈಗೊಂಡಿದ್ದು, ಹಸ್ತಪ್ರತಿಯ ರೂಪದಲ್ಲಿದೆ. ಅದನ್ನು ಭಗವಂತನ ಸೇವಾ ರೂಪದಲ್ಲಿ ಪ್ರಕಟಿಸಲಾಗಿದೆ. ಶ್ರೀ ಸತ್ಯಬೋಧ ಗುರುರಾಜ ಭಜನಾಮೃತ ಕೃತಿ ತಾರತಮ್ಯ ಅನುಗುಣವಾಗಿ ಸಂಗ್ರಹಿಸಲಾಗಿದೆ. ಶ್ರೀಮಠದ ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಅಷ್ಠಾವಧಾನ ಸೇವಾ ಸಂದರ್ಭದಲ್ಲಿ ಗಾಯನ ಮಾಡುವ ಎಲ್ಲ ದಾಸರ ಪದ್ಯಗಳು ಹಾಗೂ ಶ್ಲೋಕಗಳನ್ನು ಒಳಗೊಂಡಿದೆ. ಆಸ್ತಿಕರಿಗೆ ಅತ್ಯಂತ ಉಪಯುಕ್ತವಾದ ಈ ಕೃತಿ 6ನೇ ಬಾರಿ ಮುದ್ರಣಗೊಂಡಿದ್ದು, ಅತ್ಯಂತ ಹೆಚ್ಚು ಬೇಡಿಕೆಯಲ್ಲಿದೆ. ಮುಖ್ಯವಾಗಿ, ಅನೇಕ ಹರಿದಾಸರು ಶ್ರೀ ಸತ್ಯಬೋಧರ ತೀರ್ಥರನ್ನು ಉದ್ದೇಶಿಸಿ ರಚಿಸಿದ ಕೃತಿಗಳನ್ನು ಒಂದೆಡೆ ಸಂಗ್ರಹಿಸಿ ನೀಡಲಾಗಿದೆ. ಕೇವಲ ಭಕ್ತರ ಅನುಕೂಲತೆಗಾಗಿ ಈ ಕೃತಿಯನ್ನು ಮರು ಮುದ್ರಣ ಮಾಡಲಾಗಿದೆ ಎಂದರು.
ಪ್ರಮೋದಾಚಾರ್ಯ ರಾಯಚೂರ ಪ್ರಾಸ್ತಾವಿಕವಾಗಿ ಮಾತನಾಡಿ, ದಿ. ಕೇಶವದಾಸ ದೇಶಪಾಂಡೆಯವರು ಜೀವನ ಪರ್ಯಂತ ಶ್ರೀಮಠ, ದಾಸ ಪರಂಪರೆಯ ಸೇವೆ ಸಲ್ಲಿಸಿದ್ದರು. ಸ್ವತಃ ಗೆಜ್ಜೆ ಕಟ್ಟಿ ನರ್ತಿಸಿ ರಥೋತ್ಸವ, ಪಲ್ಲಕ್ಕಿ ಉತ್ಸವಗಳನ್ನು ನಿರ್ವಹಿಸುತ್ತಿದ್ದರು. ಅವರ ಸಂಗ್ರಹ ಕೃತಿ ಮತ್ತೆ ಲಭ್ಯವಾಗಿರುವುದು ಸಂತಸದಾಯಕ ಎಂದರು.
ಶ್ರೀ ಮಠದ ಪೂಜಾ ಪರ್ಯಾಯಸ್ಥ ಅವಿನಾಶಾಚಾರ್ಯ ರಾಯಚೂರ ಅವರು ಶ್ರೀ ಸತ್ಯಬೋಧ ಗುರುರಾಜ ಭಜನಾಮೃತ ಎಂಬ ಕೃತಿಯ 6ನೇ ಮುದ್ರಣದ ಆವೃತ್ತಿ ಬಿಡುಗಡೆಗೊಳಿಸಿದರು.
ಅರ್ಚಕರಾದ ಪ್ರವೀಣಾಚಾರ್ಯ ಆಯಿ, ಪವಮಾನಾಚಾರ್ಯ ನಾಮಾವಳಿ, ಅಭಿಷೇಕಾಚಾರ್ಯ ರಾಯಚೂರ, ಪಾಂಡುರಂಗ ರಿತ್ತಿ, ವಿಜಯೇಂದ್ರ ರಿತ್ತಿ ಹಾಗೂ ಇತರರು ಪಾಲ್ಗೊಂಡಿದ್ದರು. ಪರ್ಯಾಯಸ್ಥರಾದ ಅಮಿತಾಚಾರ್ಯ ರಾಯಚೂರ, ಅನೂಪಾಚಾರ್ಯ ರಾಯಚೂರ ಕಾರ್ಯಕ್ರಮ ನಿರ್ವಹಿಸಿದರು.