ಕಣ್ಣೆದುರೇ ಕುಸಿದು ಬಿತ್ತು ಮೂರಂತಸ್ತಿನ ಕಟ್ಟಡ!

Kattada
Published on

ಮಂಜೇಶ್ವರ: ವರ್ಕಾಡಿ ಸಮೀಪದ ಸುಂಕದಕಟ್ಟೆ ಬಳಿ ಮೂರಂತಸ್ತಿನ ಕಟ್ಟಡ ಭಾನುವಾರ ಕುಸಿದು ಬಿದ್ದಿದೆ. ಶಿಥಿಲಗೊಂಡಿದ್ದ ಕಟ್ಟಡದಲ್ಲಿ ಯಾರೂ ವಾಸವಿರದ ಕಾರಣ ಜೀವಹಾನಿ ಸಂಭವಿಸಿಲ್ಲ.


ಸುಂಕದಕಟ್ಟೆಯ ಸುರೇಂದ್ರ ಪೂಜಾರಿ ಮಾಲೀಕತ್ವದಲ್ಲಿದ್ದ ಮೂರಂತಸ್ತಿನ ಕಟ್ಟಡದಲ್ಲಿ ವರ್ಕಾಡಿ ಪಂಚಾಯಿತಿ ಬಿಜೆಪಿ ಸಮಿತಿ ಕಾರ್ಯಾಲಯ, ಜೀವವಿಮಾ ನಿಗಮದ ಕಚೇರಿ, ಟೈಲರಿಂಗ್ ಅಂಗಡಿ, ಪೀಠೋಪಕರಣ ಅಂಗಡಿ ಹಾಗೂ 4 ವಸತಿ ಕೊಠಡಿಗಳಿದ್ದ ಸಂಕೀರ್ಣ ಕಾರ್ಯಾಚರಿಸುತ್ತಿತ್ತು. ಇತ್ತೀಚೆಗೆ ನಿರ್ಮಿಸಿದ್ದ ಕಟ್ಟಡವಾದರೂ ಬಿರುಕುಗಳು ಕಂಡುಬಂದ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಕಟ್ಟಡದಲ್ಲಿದ್ದವರನ್ನು ಸ್ಥಳಾಂತರಿಸಲಾಗಿತ್ತು. ಕೆಲ ತಿಂಗಳ ಹಿಂದೆಯೇ ಕಟ್ಟಡ ಶಿಥಿಲಗೊಂಡಿರುವುದು ಗಮನಕ್ಕೆ ಬಂದಾಗ ಮಾಲೀಕರು ಅದನ್ನು ದುರಸ್ತಿಗೊಳಿಸಿದರೂ ಮತ್ತೆ ಕಟ್ಟಡ ಶಿಥಿಲಗೊಂಡಿತ್ತು.


ಕಳಪೆ ಗುಣಮಟ್ಟದ ಸಿಮೆಂಟ್, ಎಂಸ್ಯಾಂಡ್ ಉಪಯೋಗ ಮತ್ತು ಅನುಭವ ರಹಿತ ಉತ್ತರ ಭಾರತದ ಕಾರ್ಮಿಕರಿಂದ ನಿರ್ಮಾಣ ಕಾರ್ಯ ನಡೆದಿರುವುದು ಕಟ್ಟಡ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net