

ಶೃಂಗೇರಿ: ಬಿರು ಬಿಸಿಲಿಗೆ ನದಿ, ಹಳ್ಳಗಳು ಬತ್ತುವ ಹಂತದಲ್ಲಿದ್ದಾಗ ಎರಡು ದಿನಗಳಲ್ಲಿ ಬಂದ ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿವರೆಗೆ ಮೂರು ಇಂಚಿನಷ್ಟು ಮಳೆಯಾಗಿದೆ. ಶುಕ್ರವಾರ ರಾತ್ರಿ ಗುಡುಗಿನ ಆರ್ಭಟದ ಜತೆ ಮಳೆ ಜೋರಾಗಿ ಸುರಿದಿದೆ. ಶೃಂಗೇರಿ 30 ಮಿಮೀ, ಕಿಗ್ಗಾ 27 ಮಿಮೀ ಹಾಗೂ ಕೆರೆಕಟ್ಟೆ 54 ಮಿಮೀ ಮಳೆಯಾಗಿದೆ.
ಅಡಕೆ ಬೆಳೆಗೆ ತಗುಲಿದ ಹಳದಿ ಎಲೆರೋಗ, ಎಲೆಚುಕ್ಕೆ ರೋಗದಿಂದ ಅಡಕೆ ಬೆಳೆ ಕುಸಿತಗೊಂಡ ಪರಿಣಾಮ ರೈತರು ಕಾಫಿಗಿಡ ಹಾಗೂ ಕಾಳುಮೆಣಸು ಬಳ್ಳಿಗಳನ್ನು ಬೆಳೆಸುವತ್ತ ಚಿತ್ತ ಹರಿಸಿದ್ದರು. ತೋಟ ಹಾಗೂ ಖುಷ್ಕಿ ಜಾಗದಲ್ಲಿ ಕಾಫಿಗಿಡಗಳನ್ನು ಈ ಬಾರಿ ಶೇ.65 ರೈತರು ಬೆಳೆಸಿದ್ದಾರೆ. ಪ್ರಸ್ತುತ 50 ಕೆ.ಜಿ ಕಾಫಿಗೆ ಮಾರುಕಟ್ಟೆಯಲ್ಲಿ 11 ಸಾವಿರ ರೂ. ಬೆಲೆ ಇದೆ. ಬೇಸಿಗೆಯಲ್ಲಿ ತುಂತುರು, ಹನಿ ನೀರಾವರಿ ಮೂಲಕ ಕಾಫಿಗಿಡಗಳಿಗೆ ನೀರು ಕೊಟ್ಟು ಪೋಷಣೆ ಮಾಡಲಾಗಿತ್ತು. ಪ್ರಕೃತಿ ಮುನಿಸಿಕೊಂಡು ಮಳೆ ಕೈಕೊಡುತ್ತದೆಯೋ ಎಂಬ ಆತಂಕದಲ್ಲಿ ಇದ್ದ ರೈತರಿಗೆ ಈಗ ತೋಟಗಳಲ್ಲಿ ಅರಳಿನಿಂತ ಕಾಫಿ ಹೂಗಳನ್ನು ಕಂಡು ಅವರ ಮೊಗದಲ್ಲಿ ಮಂದಹಾಸ ಮೂಡಿದೆ.