ಮೊಸರು, ಮಜ್ಜಿಗೆ, ಲಸ್ಸಿ ದರ ತಗ್ಗಿಸಲು ಕೆಎಂಎಫ್​ಗೆ ಸಿಎಂ ಸೂಚನೆ

Bommai
Published on

ಬೆಂಗಳೂರು: ಜನ ಸಾಮಾನ್ಯರ ಮೇಲೆ ಜಿಎಸ್​ಟಿ ಬರೆ ಎಳೆಯಲಾಗಿದ್ದು, ಇಂದಿನಿಂದ ಹಾಲಿನ ಉತ್ಪನ್ನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಈ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ, ಮೊಸರು, ಮಜ್ಜಿಗೆ, ಲಸ್ಸಿ ದರ ತಗ್ಗಿಸಲು ಕೆಎಂಎಫ್​ಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಕೇಂದ್ರ ವಿತ್ತ ಸಚಿವಾಲಯ ಮೊಸರು, ಮಜ್ಜಿಗೆ ಮತ್ತು ಸಿಹಿಲಸ್ಸಿ ಉತ್ಪನ್ನಗಳ ಮೇಲೆ ಜಿ.ಎಸ್​.ಟಿ.(ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಿಸಿರುವುದಾಗಿ ಕೆಎಂಎಫ್​​ ತಿಳಿಸಿದೆ. ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೇ ದರ ಮುದ್ರಿತವಾಗಿದ್ದು, ಈ ದಾಸ್ತಾನು ಮುಗಿಯುವವರೆಗೆ ಇಂಕ್​ ಜೆಟ್​ ಮೂಲಕ ಪರಿಷ್ಕೃತ ದರಗಳನ್ನು ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುವುದು. ಗ್ರಾಹಕರು, ಸಾರ್ವಜನಿಕರು ಸಹಕರಿಸಬೇಕು ಎಂದು ಕೆಎಂಎಫ್​ ಕೋರಿದೆ. ಮೊಸರು-ಮಜ್ಜಿಗೆ ಬೆಲೆಯೂ ಹೆಚ್ಚಾದರೂ ಬಡವರು, ಜನಸಾಮಾನ್ಯರು ಬದುಕೋದಾದರೂ ಹೇಗೆ? ಎಂಬ ಆಕ್ರೋಶ ಮೇಲೂ ಭುಗಿಲೆದ್ದಿದೆ.

ಈ ಹಿನ್ನೆಲೆ ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಹಾಲು, ಮೊಸರಿನ ಮೇಲೆ ಜಿಎಸ್​ಟಿಯನ್ನು ನೇರವಾಗಿ ಹಾಕಿಲ್ಲ. ಆದರೆ ಪ್ಯಾಕಿಂಗ್ ಮೇಲೆ ಶೇ.5 ಜಿಎಸ್​ಟಿ ಹಾಕಲಾಗಿದ್ದು, ಅದನ್ನು ಮರು ಪಾವತಿ ಮಾಡಿಕೊಳ್ಳುವ ಅವಕಾಶವಿದೆ. ಹಾಗಾಗಿ ಹೆಚ್ಚಳ ವಾಪಸ್ ಪಡೆಯಲು ಕೆಎಂಎಫ್​ಗೆ ಸೂಚಿಸುವೆ ಎಂದರು. ಗ್ರಾಹಕರ ಮೇಲೆ‌ ಹೆಚ್ಚಿನ ಟ್ಯಾಕ್ಸ್ ಹಾಕುವ ಅವಶ್ಯಕತೆ ಇರಲಿಲ್ಲ. ದರ ಕಡಿಮೆ ಮಾಡುವ ಬಗ್ಗೆ ನಾನು ಸೂಚನೆ ಕೊಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net