

ಮೈಸೂರು: ಫೆ.14ರಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ರಾಜಕೀಯದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಎಂಎಲ್ಸಿ ಸಿ.ಎಂ. ಇಬ್ರಾಹಿಂ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ನನಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನವನ್ನು ತಪ್ಪಿಸಲಾಯಿತು. ನನಗೆ ಆದ ಅನ್ಯಾಯ ಸರಿಪಡಿಸಲು ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ ಅವರು ಹೀರೋ ಆಗುತ್ತಿದ್ದರು. ಅದರ ಬದಲು ನನ್ನ ಮುಗಿಸಲು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಸ್ಥಾನ ನೀಡಲಾಯಿತು. ಇದು ಅಲ್ಪಸಂಖ್ಯಾತರಿಗೆ ಪ್ಯಾಂಟ್ ಬದಲು ಚಡ್ಡಿ ಕೊಟ್ಟಂತೆ ಎಂದು ಕಿಡಿಕಾರಿದರು.
ಮೈಸೂರಿಗೆ ನಾನು ಯಾರ ವಿರುದ್ದವಾಗಿಯೂ ಬಂದಿಲ್ಲ. ನಾನು ಮೂಲಭೂತ ಪ್ರಶ್ನೆ ಕೇಳಿದ್ದೇನೆ. ವಿಧಾನ ಪರಿಷತ್‌ನಲ್ಲಿ ನನಗೆ 21 ಜನರ ಬೆಂಬಲ ಇತ್ತು. ರಾತ್ರೋ ರಾತ್ರಿ ನನ್ನ ಹೆಸರು ಬದಲಾಯಿಸಿದ್ದಾರೆ. ಆಯ್ಕೆ ಮಾಡುತ್ತಾರೋ ಚುನಾಯಿತರಾಗುತ್ತಾರೋ? ಸಾಬ್ರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗ್ತಾರಾ? ನಮಗೆ ಸ್ಥಾನನೂ ಇಲ್ಲ, ಬಜೆಟ್‌ನಲ್ಲಿ ದುಡ್ಡೂ ಇಲ್ಲ. ದಲಿತರಿಗೆ ಕೊಡ್ತಾರೆ, ಮುಸ್ಲಿಮರಿಗೆ ಕೊಡಲ್ಲ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆದಾಗ ನಾನು, ವಿಶ್ವನಾಥ್, ರಮೇಶ್ ಸಲಹೆ ಕೊಟ್ಟಿದ್ದೋ. ಅನ್ನಭಾಗ್ಯ, ಕ್ಷೀರಭಾಗ್ಯ, ಹಿಂದುಳಿದ ದಲಿತರ ಸಾಲ ಮನ್ನಾ ನಮ್ಮದು. ನಾವು ಹಿನ್ನೆಲೆ ಗಾಯಕರಾಗಿದ್ದೆವು. ಇವರನ್ನು ಪರದೆ ಮೇಲೆ ಇಟ್ಟಿದ್ದೋ. ಆದರೆ ಇವರು ನಿರಂತರವಾಗಿ ನಮ್ಮ ಕುತ್ತಿಗೆ ಕೊಯ್ದರು ಎಂದು ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ಆಕ್ರೋಶ ಹೊರಹಾಕಿದರು.
ಈಗಲೂ ನಿಮ್ಮ ತಪ್ಪನ್ನು ನೀವು ಅರ್ಥ ಮಾಡಿಕೊಳ್ಳಿ. ಇಂದಿನಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದೇನೆ. ತನ್ವೀರ್ ಸೇಠ್ ಅವರನ್ನು ವಿರೋಧ ಪಕ್ಷದ ನಾಯಕ ಮಾಡಿ. ಯು.ಟಿ. ಖಾದರ್‌ರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ. ಟಿಪ್ಪು ಸುಲ್ತಾನ್ ಹುಟ್ಟಿದ ಭೂಮಿಯಲ್ಲಿ ನಾವು ಹುಟ್ಟಿರೋದು. ಮುಂದಿನ ನಡೆ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡುವೆ. ಕಲಬುರಗಿ ರಾಯಚೂರಿನಿಂದ ನನಗೆ ಬೆಂಬಲವಿದೆ. ಅಹಿಂದ ಅಲ್ಪಸಂಖ್ಯಾತ ಲಿಂಗಾಯತ ಒಕ್ಕಲಿಗರನ್ನು ಜತೆಗೆ ಕರೆದುಕೊಂಡು ಹೋಗುತ್ತೇವೆ. ಈ ಮೂಲಕ ಮುಂದಿನ ದಿನದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದರು.
ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಸಂಪರ್ಕದಲ್ಲಿದ್ದಾರೆ. ರಣಕಹಳೆ ಶಂಖ ಊದುತ್ತಿದ್ದೇನೆ, 1995ರಲ್ಲಿ ಆದ ಗತಿ 2023ಕ್ಕೂ ಆಗುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ ಸೇರಿದಂತೆ ಎಲ್ಲ ಪಕ್ಷಗಳ ಕಾರ್ಯಕರ್ತರೂ ನನ್ನ ಜತೆ ಇದ್ದಾರೆ. ಮುಸ್ಲಿಂ ಧರ್ಮ ಗುರುಗಳು ಕಾಂಗ್ರೆಸ್ ವಿರುದ್ಧ ಆಗಿದ್ದಾರೆ ಎಂದು ಇಬ್ರಾಹಿಂ ಹೇಳಿದರು.