ಬಜೆಟ್​ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿ: ಆರ್ಥಿಕ ಶಿಸ್ತು ಕಾಪಾಡಿದ್ದೇವೆ...

bommai
Published on

ಬೆಂಗಳೂರು: ಇಂದು ಚೊಚ್ಚಲ ಬಜೆಟ್​ ಮಂಡಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಆರ್ಥಿಕ ಶಿಸ್ತು ಕಾಪಾಡಿದ್ದೇವೆ ಎಂದರು.

ಕೋವಿಡ್ ಕಡಿಮೆಯಾಗುತ್ತಿದ್ದಂತೆ ಸರ್ಕಾರದ ಕ್ರಮಗಳಿಂದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. ರಾಜಸ್ವ ಸಂಗ್ರಹ, ಸ್ವೀಕೃತಿ ಗುರಿ ಮುಟ್ಟಲಿದೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ 19 ಸಾವಿರ ಕೋಟಿ ಬಜೆಟ್ ಗಾತ್ರ ಹಿಗ್ಗಿದೆ. ಈ ಬಾರಿ ಬಜೆಟ್​ ಗಾತ್ರ 2,65,720 ಕೋಟಿ ಆಗಿದೆ ಎಂದರು.

ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ 2700 ಕೋಟಿ ರೂ. ಹೆಚ್ಚಳವಾಗಿದೆ. 2006ರಿಂದ ರೆವಿನ್ಯೂ ಸರ್ಪ್ಲೆಸ್ ಇತ್ತು. ಕೋವಿಡ್ ಕಾರಣಕ್ಕೆ ಡಿಫಿಸಿಟ್ ಆಗಿದೆ. ಈ ಬಾರಿ ರೆವಿನ್ಯೂ ಡೆಫಿಸಿಟ್ 14699 ಕೋಟಿ ರೂ. ಆಗಿದೆ. 67 ಸಾವಿರ ಕೋಟಿ ರೂ. ಸಾಲ ಪಡೆಯಲು ಅವಕಾಶ ಇತ್ತು. ಆದರೆ, ಆರ್ಥಿಕ ಸಂಪನ್ಮೂಲ ಹೆಚ್ಚು ಮಾಡುವುದರಿಂದ 63,100 ಕೋಟಿ ರೂ. ಸಾಲದ ಮಿತಿ ಸೀಮಿತ ಮಾಡಿದ್ದೇವೆ. ಆರ್ಥಿಕ ಶಿಸ್ತು ಕಾಪಾಡಿದ್ದೇವೆ ಎಂದರು.

ಶೇ.25 ಮಿತಿಗೆ ಬರಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ಅದು ನಮ್ಮ‌ ಗುರಿ, ಕಳೆದ ಮೂರು ವರ್ಷ ಸಾಲ ಮಾಡಬೇಕಾಯಿತು. ರಾಜಸ್ವ ಸ್ವೀಕೃತಿಯು 1,89,000 ಕೋಟಿಗಳಿದ್ದು, 17 ಸಾವಿರ ಕೋಟಿ ರೂ. ಹೆಚ್ಚಾಗಿದೆ. ಈ ಬಾರಿ ಬಜೆಟ್‌ನಲ್ಲಿ ಜಿಎಸ್​ಟಿ ಪರಿಹಾರ ಲೆಕ್ಕಕ್ಕೆ ಹಿಡಿದಿಲ್ಲ. ಜೂನ್​ವರೆಗೆ 4-5 ಸಾವಿರ ಕೋಟಿ ಸಿಗುತ್ತದೆ. ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಜೂನ್​ವರೆಗೆ ನಿರ್ಧಾರ ಮಾಡಲು ಸಮಯ ಇದೆ. ಇದು ಬಂದರೆ ರೆವಿನ್ಯೂ ಡಿಫಿಸಿಟ್ ಕಡಿಮೆಯಾಗಲಿದೆ ಎಂದರು.

ಕಳೆದ ವರ್ಷ 24,073 ಕೋಟಿ ರೂಪಾಯಿ ಕೇಂದ್ರದ ತೆರಿಗೆ ಪಾಲು ಬಂದಿತ್ತು. ಈ ಬಾರಿ 29,783 ಕೋಟಿ ರೂ. ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಹೆಚ್ಚಾಗಿದೆ. ಸಹಾಯಧನ ಕೂಡ ಒಂದೂವರೆ ಸಾವಿರ ಕೋಟಿ ಹೆಚ್ಚಾಗಿದೆ. ಮೋಟಾರ್ ವೆಹಿಕಲ್ ತೆರಿಗೆ ಗುರಿ ಮುಟ್ಟುವುದು ಕಷ್ಟ. ಉಳಿದ ಎಲ್ಲ ವರ್ಗದಲ್ಲಿ ತೆರಿಗೆ ನಿಗದಿತ ಗುರಿ ಮುಟ್ಟುತ್ತೇವೆ. ತೆರಿಗೆಯೇತರ ಆದಾಯ ಹೆಚ್ಚಾದರೂ ಹಣಕಾಸು ಶಿಸ್ತು ಸರಿಮಾಡಿಕೊಳ್ಳಲು ಅವಕಾಶ ಸಿಗಲಿದೆ. ಅನಗತ್ಯ ವೆಚ್ಚ ಕಡಿತ. ಈ ಎರಡು ಫಾರ್ಮೂಲದತ್ತ ನನ್ನ ಗುರಿ ಎಂದು ಸಿಎಂ ವಿವರಿಸಿದರು.

ನಮ್ಮ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಿದ್ದೇವೆ. ರೈತರು ಎಲ್ಲಿ ಹೋದರೂ ಯಶಸ್ವಿನಿ ಬೇಕೆಂದು ಕೇಳುತ್ತಿದ್ದರು. ಈ ಬಾರಿ ಮರು ಜಾರಿ ಮಾಡಲಾಗಿದೆ. ತೋಟಗಾರಿಕೆ ಪ್ರೋತ್ಸಾಹಧನ ಶೇ.25 ಹೆಚ್ಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net