

ಬೆಂಗಳೂರು: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಮಹತ್ವ ಕೊಡಬೇಕಿಲ್ಲ. ಆ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಂಡಿಲ್ಲ. ಅವರು ಯಾರನ್ನು ಜೋಡಿಸುತ್ತಾರೆ. ಹೇಗೆ ತೋಡೋ ಮಾಡುತ್ತಾರೆ ಅಂತ ಇಡೀ ಜಗತ್ತಿಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.
ಜನಸಂಕಲ್ಪ ಯಾತ್ರೆಗೆ ತೆರಳುವ ಮುನ್ನ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಾಂಗ್ರೆಸ್ನ ಜೋಡೋ ಯಾತ್ರೆಗೆ ಪ್ರತಿಯಾಗಿ ಜನಸಂಕಲ್ಪ ಯಾತ್ರೆ ಕೈಗೊಂಡಿಲ್ಲ, ಈ ಸಮಾವೇಶಗಳ ಮೂಲಕ ಪ್ರತಿಪಕ್ಷಗಳಿಗೆ ಸಂದೇಶ ನೀಡಬೇಕಾದ ಅಗತ್ಯವಿಲ್ಲ ಎಂದು ತಳ್ಳಿಹಾಕಿದರು.
ರಾಜ್ಯ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಏನೆಲ್ಲ ಸಾಧನೆ ಮಾಡಿದೆ ಎಂದು ಜನರಿಗೆ ತಿಳಿಸುವುದು, ಮುಂದೆ ಜಾರಿಗೆ ತರಲಿರುವ ಕಾರ್ಯಕ್ರಮಗಳ ಸದ್ಬಳಕೆ ಕುರಿತು ಮಾಹಿತಿ ನೀಡಿ ಜನರ ವಿಶ್ವಾಸ ಗಳಿಕೊಳ್ಳುವುದು ಪ್ರವಾಸದ ಉದ್ದೇಶ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಗೆಲ್ಲಿಸಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿಸಲಾಗುವುದು. ಸಮಾವೇಶದ ಸ್ವರೂಪವನ್ನು ಆಯಾ ಜಿಲ್ಲೆಯ ಸ್ಥಳೀಯ ಘಟಕಗಳು ನಿರ್ಧರಿಸುತ್ತವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಕ್ಷಣೆಗೆ ಬದ್ಧ: ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ರಕ್ಷಣೆಗೆ ಸರ್ಕಾರ ಬದ್ಧವಿದೆ. ಎಸ್ಸಿ, ಎಸ್ಟಿ ಮೀಸಲು ಹೆಚ್ಚಳವನ್ನು ಹಿಂದುಳಿದ ವರ್ಗಗಳ ಆಯೋಗ, ತಜ್ಞರ ಸಮಿತಿ ಅವಲೋಕಿಸಿದೆ. ಆಯೋಗ ಮತ್ತು ತಜ್ಞರು ನೀಡಲಿರುವ ವರದಿ ಆಧರಿಸಿ ಕ್ರಮ ವಹಿಸಲಾಗುವುದು. ಎಲ್ಲ ಸಮುದಾಯಗಳು ಮೀಸಲು ಪ್ರಮಾಣ ಹೆಚ್ಚಾಗಬೇಕು ಎಂಬ ಆಕಾಂಕ್ಷೆ ಹೊಂದಿರುವುದು ಸಹಜ. ಎಲ್ಲ ಮನವಿಗಳನ್ನು ಸಮಾನವಾಗಿ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.