ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ತಂದ ಧೀಮಂತ ನಾಯಕ ಅರಸು: ಸಿಎಂ ಬೊಮ್ಮಾಯಿ‌ ಗುಣಗಾನ

New Project(22)
Published on

ಬೆಂಗಳೂರು: ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಜತೆಗೆ ಅನುಷ್ಠಾನಕ್ಕೆ ತಂದವರು ಮಾತ್ರ ಡಿ.ದೇವರಾಜ ಅರಸು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಗುಣಗಾನ ಮಾಡಿದರು.

ದೇವರಾಜ ಅರಸು ಪುಣ್ಯತಿಥಿ ನಿಮಿತ್ತ ವಿಧಾನಸೌಧ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅನೇಕ ವಿರೋಧಗಳನ್ನು ಲೆಕ್ಕಿಸದೆ ಭೂಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದರಿಂದ ಕರ್ನಾಟಕದಲ್ಲಿ ಅತಿಹೆಚ್ಚು ಜನರು ಭೂಒಡೆಯರಾಗಲು ಸಾಧ್ಯವಾಯಿತು. ಅರಸು ಅವರು ಕೈಗಾರೀಕರಣಕ್ಕೂ ಒತ್ತು ನೀಡಿದ್ದರು ಎಂದರು.

ಮೂವರ ಗೆಲುವು ನಿಶ್ಚಿತ: ರಾಜ್ಯಸಭೆ ಚುನಾವಣೆಯಲ್ಲಿ ಪ್ರತಿಬಾರಿ ಬದಲಾವಣೆಗಳಾಗಿವೆ. ಕಳೆದ ಬಾರಿ ಏಳು ಶಾಸಕರು ಬಹಿರಂಗ ಬಂಡಾಯ ಸಾರಿ ತಮ್ನದೇ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ್ದರು. ಯಾವುದೇ ಪಕ್ಷಕ್ಕೆ ಸೇರದ ಉದ್ಯಮಿ ಆಯ್ಕೆಯಾದದ್ದಿದೆ. ರಹಸ್ಯ ಮತದಾನದ ಸಂದರ್ಭದಲ್ಲೂ ಅನೇಕ ಬದಲಾವಣೆಗಳಾಗಿವೆ. ಈ ಬಾರಿ ಚುನಾವಣೆಯಲ್ಲೂ ಅಂತಹ ಬದಲಾವಣೆ ಸಾಧ್ಯವಿದ್ದು, ಪಕ್ಷದಿಂದ ಸ್ಪರ್ಧಿಸಿರುವ ಮೂವರು ಗೆಲ್ಲಲಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಮಾಜಿ ಶಾಸಕ ಲೆಹರ್ ಸಿಂಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ದೇವರಾಜ ಅರಸು ಕುಟುಂಬದ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net