

ಬಂಗಾರಪೇಟೆ: ಪಟ್ಟಣದಲ್ಲಿ ತಹಸೀಲ್ದಾರ್ ಕುರ್ಚಿಗಾಗಿ ಇಬ್ಬರು ತಹಸೀಲ್ದಾರರ ನಡುವೆ ಉಂಟಾಗಿರುವ ಕಾನೂನು ಸಮರದ ಹೋರಾಟದಿಂದ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ನಿತ್ಯ ಕಚೇರಿಗೆ ಬಂದು ವಾಪಸ್ ಹೋಗಬೇಕಾದ ಪರಿಸ್ಥಿತಿ ನಿಮಾಣವಾಗಿದೆ.
ಬಂಗಾರಪೇಟೆ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ವೆಂಕಟೇಶಪ್ಪ ಅವರನ್ನು ಸರ್ಕಾರ ಜಿಲ್ಲಾಧಿಕಾರಿ ಕಚೇರಿಯ ಪುರಸಭೆ ತಹಸೀಲ್ದಾರರನ್ನಾಗಿ ಡಿ.31ರಂದು ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಜರಾಯಿ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎನ್ ಸುಜಾತಾ ಅವರನ್ನು ನೇಮಕ ಮಾಡಲಾಗಿದೆ.
ಕಾನೂನಿನ ಪ್ರಕಾರ ಅವಧಿಪೂರ್ವ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಆದೇಶ ಪ್ರಶ್ನಿಸಿ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಅವರು ಕರ್ನಾಟಕ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿ ವರ್ಗಾವಣೆ ಆದೇಶಕ್ಕೆ ತಡೆ ತಂದಿದ್ದರು. ಆದೇಶದ ಪ್ರತಿಯನ್ನು ಹಿಡಿದು ಶನಿವಾರ ಇತ್ತ ಕೆಲಸಕ್ಕೆ ಹಾಜರಾದ ಎಸ್.ವೆಂಕಟೇಶಪ್ಪ ಅವರಿಗೆ ಕಚೇರಿಯಲ್ಲಿ ಕೂರಿಸಲು ಅವಕಾಶ ನೀಡದೆ ತಹಸೀಲ್ದಾರ್ ಸುಜಾತಾ ಬೀಗ ಜಡಿಸಿದ್ದ ಕಾರಣ ಇತ್ತೀಚೆಗೆ ದೊಡ್ಡ ಹೈ ಡ್ರಾಮವೇ ನಡೆದಿತ್ತು. ಕುರ್ಚಿ ವಿಚಾರವಾಗಿ ಇಬ್ಬರು ತಹಸೀಲ್ದಾರರ ನಡುವೆ ನಡೆದ ಮುಸುಕಿನ ಗುದ್ದಾಟಕ್ಕೆ ಸಾರ್ವಜನಿಕರು ನೋಡಿ ಮೂಕ ವಿಸ್ಮಯರಾಗಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆ
ತಹಸೀಲ್ದಾರ್ ಸುಜಾತಾ ಅವರು ಕೆಜಿಎಫ್ ತಾಲೂಕಿನಲ್ಲಿ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ 523 ಎಕರೆ ಬಗರ್ಹುಕುಂ ಸರ್ಕಾರಿ ಭೂಮಿಯನ್ನು ನಿಯಮ ಬಾಹಿರವಾಗಿ ಮಂಜೂರು ಮಾಡಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ ಉಂಟು ಮಾಡಿದ್ದರು. ಈ ಬಗ್ಗೆ ಆರ್ಟಿಐ ಕಾರ್ಯಕರ್ತ ವೆಂಕಟೇಶಗೌಡ ಎಂಬುವವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸಿದ್ದರು. ಲೋಕಾಯುಕ್ತ ಪೊಲೀಸರು ತಹಸೀಲ್ದಾರ್ ಕೆ.ಎನ್ ಸುಜಾತಾ, ಶಿರಸ್ತೇದಾರ್ ಕೆಸಿ.ಸುರೇಶ್, ದ್ವೀತಿಯ ದರ್ಜೆ ಸಹಾಯಕ ಪವನ್ಕುಮಾರ್ ವಿರುದ್ಧ ಹೆಚ್ಚಿನ ತನಿಖೆಗಾಗಿ ಜ.1 ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ ತಹಸೀಲ್ದಾರ್ ಸುಜಾತಾ ಅವರು ಶನಿವಾರ ಕಚೇರಿಯಿಂದ ಹೋದವರು ಇದೂವರೆಗೂ ಕಚೇರಿಗೆ ಆಗಮಿಸಿಲ್ಲ.
ಡಿಸಿಯತ್ತ ಹೋದವರೂ ವಾಪಸ್ ಆಗಿಲ್ಲ
ಇತ್ತ ಕೆಇಟಿಯಿಂದ ತಡೆಯಾಜ್ಞೆ ತಂದಿರುವ ವೆಂಕಟೇಶಪ್ಪ ಡಿಸಿಯಿಂದ ರಿಲೀವಿಂಗ್ ಲೆಟರ್ ತರಲು ಶನಿವಾರವೇ ಹೋದವರು ಅವರೂ ಇತ್ತ ಮುಖ ಮಾಡಲಿಲ್ಲ. ಇದರಿಂದ ತಾಲೂಕು ಕಚೇರಿಗೆ ಯಾರೂ ತಹಸೀಲ್ದಾರರು ಇಲ್ಲದೆ ಬೀಗ ಹಾಕಲಾಗಿದೆ. ಇದರಿಂದಾಗಿ ನಿತ್ಯ ಹಲವು ಕೆಲಸ ಕಾರ್ಯಗಳಿಗೆ ತಹಸೀಲ್ದಾರರನ್ನು ಹುಡುಕಿಕೊಂಡು ಬರುವ ಸಾರ್ವಜನಿಕರು ಬರಿಕೈಯಲ್ಲಿ ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಜನಸಾಮಾನ್ಯರಿಗೆ ಸಮಸ್ಯೆ
ತಾಲೂಕು ಕಚೇರಿಯ ಸಿಬ್ಬಂದಿ ಕೇಳಿದರೆ ಯಾರು ತಹಸೀಲ್ದಾರರಾಗಿ ಕಚೇರಿಗೆ ಬರುತ್ತಾರೋ ಗೊತ್ತಿಲ್ಲ. ಸದ್ಯ ಇರುವಂತಹ ಸುಜಾತಾ ಅವರು ರಜೆ ಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಸುಜಾತಾ ಅವರಿಗೆ ರಜೆ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲಾವನ್ನು ನೋಡುತ್ತಿದ್ದರೆ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಾದ ಅಧಿಕಾರಿಗಳಿಂದಲೇ ಜನ ಸಾಮಾನ್ಯರಿಗೆ ಸಮಸ್ಯೆ ಎದುರಾಗಿದೆ.
"ತಹಸೀಲ್ದಾರರ ಸಹಿಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸುತ್ತಾಡುತ್ತಿದ್ದೇನೆ ಆದರೆ, ಕಚೇರಿಗೆ ಬೀಗ ಹಾಕಲಾಗಿದೆ. ಸಿಬ್ಬಂದಿ ಕೇಳಿದರೆ ರಜೆಯಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಯಾವಾಗ ಬರುತ್ತಾರೆ ಎಂದರೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ."
- ರಾಮಪ್ಪ, ಸಾರ್ವಜನಿಕ
"ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಅವರ ಕೆಇಟಿ ಆದೇಶದ ಬಗ್ಗೆ ಸರ್ಕಾರದಿಂದ ಡೈರೆಕ್ಷನ್ ಕೇಳಲಾಗಿದೆ. ಸರ್ಕಾರದಿಂದ ಬರುವ ಆದೇಶದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ತಹಸೀಲ್ದಾರ್ ಆಗಿ ಕಾರ್ಯ ಕಾರ್ಯನಿರ್ವಹಿಸುತ್ತಿರುವ ಸುಜಾತಾ ಅವರಿಗೆ ಯಾವುದೇ ರಜೆ ಮಂಜೂರು ಮಾಡಿಲ್ಲ. ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ."
- ಡಾ.ಎಂ.ಆರ್ ರವಿ, ಜಿಲ್ಲಾಧಿಕಾರಿ, ಕೋಲಾರ