

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸತ್ಯವನ್ನು ವರದಿಯಲ್ಲಿ ತಿಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕ್ಲೀನ್‌ಚಿಟ್ ಕೊಟ್ಟಿರುವುದು ಸರಿಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದವರ ವಿಚಾರದಲ್ಲಿ ಈಗ ಲೋಕಾಯುಕ್ತ ಯಾವುದೇ ಸಾಕ್ಷಿ ಇಲ್ಲ ಅಂದಿದೆ. ಬಾವಮೈದುನ ಕೇಸ್‌ಗೂ-ಸಿದ್ದರಾಮಯ್ಯರಿಗೂ ಏನು ಸಂಬಂಧ? ಆತ ರಿಯಲ್ ಎಸ್ಟೇಟ್ ಉದ್ಯಮಿಯಲ್ಲ. ಭೂಮಿ ಖರೀದಿಸುವಾಗ ಪಹಣಿ, ಪಟ್ಟ ನೋಡಿ ಖರೀದಿಸುತ್ತಾರೆ. ಈಗ 50:50 ಯೋಜನೆಯಡಿ ಲೇಔಟ್ ಮಾಡದೆ ಹೋದರೆ ಅವರಿಗೆ ಸಂಬಳ ಕೊಡಲು ಕಾಸು ಇರುವುದಿಲ್ಲ. ರಾಜ್ಯದಲ್ಲೇ 50:50 ಅನುಪಾತ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
ನನ್ನ ಅಕ್ಕನ ಮಗ ಪಡೆದಿರುವ ನಿವೇಶನಗಳಿಗೂ ಮತ್ತು ನನಗೂ ಸಂಬಂಧ ಇಲ್ಲ. ಸಂಬಂಧ ಇದೇ ಅಂತ ಇಟ್ಟುಕೊಳ್ಳಿ. ಕಾನೂನುಬದ್ಧವಾಗಿ ಇದೆಯೇ ಎಂಬುದನ್ನು ಚೆಕ್ ಮಾಡಿ ಮಾತನಾಡಬೇಕು. ಸಿಎಂ ಬಾಮೈದ ಎಂಬ ಕಾರಣಕ್ಕಾಗಿ ದೊಡ್ಡ ಆಂದೋಲನ ಮಾಡಿಬಿಟ್ಟರು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವುದಕ್ಕೆ ಇದು ವಿಚಾರವೇ ಅಲ್ಲ. ಕಳೆದ ಹಲವು ತಿಂಗಳಿಂದ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಾನಾ ಈ ಹಿಂದೆಯೇ ಮಾತನಾಡಿದೆ. ಆದರೆ, ಅಂದಿನ ನನ್ನಮಾತು ಕೆಲವರಿಗೆ ಬೇರೆ ರೀತಿಯಲ್ಲಿ ಅರ್ಥವಾಗಿ ನನ್ನ ಮೇಲೆ ಸೇಡು, ದ್ವೇಷ ಸಾಧಿಸಲು ಕಾರಣವಾಯಿತು ಎಂದರು.
ನಾನು ನೇರವಾಗಿ ಮಾತನಾಡಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಯಾರೇ ದೂರುದಾರ ಆಗಲಿ ಅವರು ಒಂದು ಪತ್ರ ಸಿಕ್ಕಿದ ತಕ್ಷಣವೇ ದೂರು ಕೊಡುತ್ತಾರೆ. ಒಂದು ಎಫ್‌ಐಆರ್ ಆದ ಕೂಡಲೇ ಅಧಿಕಾರದಲ್ಲಿ ಇರೋರರನ್ನು ರಾಜೀನಾಮೆ ಕೊಡಬೇಕು ಅಂತ ಒತ್ತಾಯಿಸಿ ಹೇಳುವುದು ಆಗಿದೆ ಎಂದು ಬೇಸರಿಸಿದರು.
ಯಾರ ರಾಜೀನಾಮೆ ಕೇಳಬೇಕಾದರೂ ಯೋಚಿಸಬೇಕು. ಸಿಎಂ ರಾಜೀನಾಮೆ ಕೇಳುವಾಗ ಅದರ ಅಗತ್ಯ ಇಲ್ಲ ಅಂತ ನಾನು ಹೇಳಿದ್ದೆ. ಎಲ್ಲ ಪಕ್ಷದವರ ಮೇಲೂ ಎಫ್‌ಐಆರ್ ಇದೆ. ಎಲ್ಲರೂ ಕೊಡಬೇಕಾಗುತ್ತದೆ ಎಂದಿದ್ದೆ. ಅದಕ್ಕೆ ಎಲ್ಲರೂ ನಾನು ಸಿದ್ದರಾಮಯ್ಯ ಪರ ಎಂದು ಹೇಳಲು ಶುರು ಮಾಡಿದರು. ಮುಡಾ ಸಭೆಯಲ್ಲಿ ಭಾಗಿಯಾದವರೂ ಈ ಮಾತು ಹೇಳಿದ್ದರು. ಸಭೆಯಲ್ಲಿ ಒಂದೇ ಒಂದು ಮಾತು ಹೇಳದವರೂ ಈ ಮಾತುಗಳನ್ನು ಹೇಳಿಬಿಟ್ಟರು ಎಂದು ಟೀಕಿಸಿದರು.