

ಮನೋಹರ್ ಬಳಂಜ ಬೆಳ್ತಂಗಡಿ
ಕೊಯ್ಯೂರು ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಜಿಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ ಕುಸಿಯುವ ಹಂತದಲ್ಲಿದೆ.
1982ರಲ್ಲಿ ಸ್ಥಳೀಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಶಾಲೆ ಪ್ರಾರಂಭವಾಗಿದೆ. ವರ್ಷಂಪ್ರತಿ 75ರಿಂದ 80 ರಷ್ಟು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಶಾಲೆಯಲ್ಲಿ ಓರ್ವ ಮುಖ್ಯಶಿಕ್ಷಕಿ, 1 ಅತಿಥಿ ಶಿಕ್ಷಕಿ ಹಾಗೂ ಗೌರವ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಠಡಿಗಳ ಸಮಸ್ಯೆ ಇದೆ. ನಲಿ,ಕಲಿ, ಕಚೇರಿ ನಿರ್ವಹಣೆ ಮತ್ತು ರಂಗ ಮಂದಿರದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಮಾಡಲು ಬಹಳ ಕಷ್ಟವಾಗುತ್ತಿದೆ. ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದರಿಂದ, ಪಾಲಕರು ತಮ್ಮ ಮಕ್ಕಳನ್ನು ದೂರದ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಐದಾರು ವಷರ್ಗಳಿಂದ ಶಾಲೆಯ ಕಟ್ಟಡ ಶಿಥಿಲವಾದ ಪರಿಸ್ಥಿತಿಯಲ್ಲಿದೆ. ಗೋಡೆಗಳು ಬಿರುಕು ಬಿಟ್ಟಿದೆ, ಮೇಲ್ಛಾವಣಿಯ ಮರ, ಮಟ್ಟುಗಳು ಗೆದ್ದಲು ಹಿಡಿದು ನೇತಾಡುವ ಸ್ಥಿತಿಯಲ್ಲಿದ್ದು, ಜೋರು ಗಾಳಿ ಮಳೆಗೆ ಕುಸಿದು ಬೀಳುವ ಸಾಧ್ಯತೆಯಿದೆ. ಕಳೆದ 3 ವಷರ್ಗಳಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
ಕಳೆದ 5 ವಷರ್ಗಳಿಂದ ಶಿಥಿಲವಾದ ಕಟ್ಟಡವೂ ಈ ವರೆಗೂ ಬಾಗಿಲು ಮುಚ್ಚಿಕೊಂಡಿದೆ. ವಿಪರ್ಯಾಸವೆಂದರೆ ಕಟ್ಟಡ ರಿಪೇರಿ ಮಾಡಲು ಮಳೆ ಹಾನಿ ಅನುದಾನದಲ್ಲಿ ಶಾಸಕರ ನಿಧಿಯಿಂದ 2 ಲಕ್ಷ ರೂ.ಮಂಜೂರು ಆಗಿತ್ತು. ಆದರೂ ಹಳೆಯ ಕಟ್ಟಡ ರಿಪೇರಿಗೆ ಹಣಕಾಸು ಕೊರತೆಯಾದ ಹಿನ್ನೆಲೆಯಲ್ಲಿ ರಂಗಮಂದಿರ ರಚನೆ ಮಾಡಿದರು.
ಈ ಕಟ್ಟಡದಲ್ಲಿ ಅಡಿಪಾಯದಿಂದ ಮೇಲ್ಛಾವಣಿವರೆಗೂ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕಟ್ಟಡದ ಬಳಿಯಲ್ಲೇ 1ರಿಂದ 5ನೇ ತರಗತಿಯ ಸಣ್ಣ, ಪುಟ್ಟ ಮಕ್ಕಳು ಓಡಾಡುವಾಗ ಅಪ್ಪಿ, ತಪ್ಪಿ, ಕಟ್ಟಡ ಬೀಳುವ ಸಂಭವವೂ ಇದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಟ್ಟಡ ತೆರವುಗೊಳಿಸಿ, ಕನಿಷ್ಠ 2 ತರಗತಿ ಕೋಣೆಗಳನ್ನು ರಚಿಸಿ ಕೊಡುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ಕೊಯ್ಯೂರು ಬಜಿಲ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಸರ್ಕಾರದ ಅನುದಾನ ಬರುತ್ತಿಲ್ಲ. ಪಂಚಾಯಿತಿಯಲ್ಲಿ ಆರ್ಥಿಕ ಸಮಸ್ಯೆಯಿದೆ. ನೂತನ ಕಟ್ಟಡ ರಚನೆಗೆ ಶಾಸಕರಲ್ಲಿ, ಶಿಕ್ಷಣ ಇಲಾಖೆ ಹಾಗೂ ಸಂಘ, ಸಂಸ್ಥೆಗಳಿಗೆ ಮನವಿ ನೀಡಲಾಗಿದೆ. ಹರೀಶ್ ಗೌಡ ಬಜಿಲ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ
ಕೊಯ್ಯೂರು ಬಜಿಲ ಸರ್ಕಾರಿ ಶಾಲೆಯ ಹಳೆಯ ಕಟ್ಟಡ ಶಿಥಿಲವಾಗಿ ಅಪಾಯ ಸ್ಥಿತಿಯಲ್ಲಿದೆ. ಶಾಲೆಯ ಅಕ್ಕ, ಪಕ್ಕದಲ್ಲಿ ಮಕ್ಕಳು, ಸಾರ್ವಜನಿಕರು ಓಡಾಡದಂತೆ ಹಗ್ಗವನ್ನು ಕಟ್ಟಿ ಬಂದೊಬಸ್ತು ಮಾಡಲಾಗಿದೆ. ಕಳೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕವಾಗಿ ನಿರ್ಣಯ ಮಾಡಿ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಕಳುಹಿಸಿಕೊಡಲಾಗಿದೆ. ಮನವಿಗೆ ಸ್ಪಂದಿಸುವ ಭರವಸೆಯಿದೆ. ಡಾ.ಪ್ರಕಾಶ್ ಎಸ್.ಅಭಿವೃದ್ಧಿ ಅಧಿಕಾರಿ, ಕೊಯ್ಯೂರು ಗ್ರಾಪಂ