

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಚಳ್ಳಕೆರೆ ನಗರಸಭೆ ಪೌರಾಯಕ್ತರ ಹುದ್ದೆಗೆ ಬಂದು- ಹೋದ ಅಧಿಕಾರಿಗಳ ಸಂಖ್ಯೆ ಎಷ್ಟು ಗೊತ್ತೆ ? ಬರೋಬ್ಬರಿ 15 ಎಂದರೆ ನಂಬುತ್ತೀರಾ?
ನಂಬಲೇ ಬೇಕು. 2018ರ ಸೆಪ್ಟೆಂಬರ್‌ನಿಂದ ಇದುವರೆಗಿನ ಅಂಕಿ ಅಂಶಗಳನ್ನು ಒಮ್ಮೆ ತಿರುವಿ ಹಾಕಿದರೆ ಗಾಬರಿ ಆಗುತ್ತದೆ. ಪೌರಾಯುಕ್ತರ ಖುರ್ಚಿ ಮ್ಯೂಸಿಕಲ್ ಚೇರ್‌ಗಿಂತ ಕಡೆಯಾಗಿ ಹೋಗಿದೆ.
ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ. ಇದಕ್ಕೆ ಯಾರ ಆಕ್ಷೇಪವೂ ಇರಲಿಕ್ಕಿಲ್ಲ. ಆದರಿಲ್ಲಿ, ಒಂದು ದಿನ, ಎಂಟು ದಿನ, 19 ದಿನಗಳಿಗೂ ವರ್ಗಾವಣೆ ಮಾಡಿದ ಉದಾಹರಣೆಗಳಿವೆ.
ಹೀಗೆ ಪೌರಾಯುಕ್ತರನ್ನು ಮನಬಂದಂತೆ ಬದಲಾವಣೆ ಮಾಡುತ್ತ ಹೋದರೆ ನಗರಸಭೆಯ ಕೆಲಸ ಕಾರ್ಯಗಳಿಗೆ ಗ್ರಹಣ ಹಿಡಿಯದೆ ಮತ್ತಿನ್ನೇನು? ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಜನಾಕ್ರೋಶ ವ್ಯಕ್ತವಾಗುತ್ತಿದೆ.
ವಿಸ್ತಾರವಾಗಿ ಬೆಳೆಯುತ್ತಿರುವ ನಗರದಲ್ಲಿ ಶುದ್ಧ ನೀರಿನ ಘಟಕಗಳ ಸಮಸ್ಯೆ ಸೇರಿ ಸ್ವಚ್ಛತೆ, ಸ್ಮಶಾನ, ಹಕ್ಕುಪತ್ರ, ರಾಜ ಕಾಲುವೆಗಳ ಒತ್ತುವರಿ, ಶೌಚಗೃಹ ಸೌಲಭ್ಯ ಗಳ ಕೊರತೆ ದಿನೇ ದಿನೆ ಹೆಚ್ಚುತ್ತಿವೆ.
2017ರಲ್ಲಿ ನಗರಸಭೆ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತಾದರೂ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಸ್ವಂತ ಕಟ್ಟಡ ಕಟ್ಟಿಕೊಳ್ಳದವರು ಜನಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಜನರ ಪ್ರಶ್ನೆಗೆ ನಗರಸಭೆ ಆಡಳಿತವನ್ನೇ ಅಣಕಿಸಿದಂತಿದೆ.
ಪದೇ ಪದೆ ಪೌರಾಯುಕ್ತರ ವರ್ಗಾವಣೆ
2018 ಸೆಪ್ಟಂಬರ್‌ನಿಂದ 2019 ನವಂಬರ್ ಜೆ.ಟಿ.ಹನುಮಂತರಾಜು
2019 ನವೆಂಬರ್‌ನಿಂದ 2020 ಜುಲೈ ಪ್ರಭಾರ ಆಗಿ ಪಿ.ಪಾಲಯ್ಯ
2020 ಜುಲೈ ತಿಂಗಳಲ್ಲಿ 19 ದಿನ ಶ್ಯಾಮಲಾ
2020 ಜುಲೈನಿಂದ ಆಗಸ್ಟ್ ಪಿ.ಪಾಲಯ್ಯ
2020 ಆಗಸ್ಟ್‌ನಿಂದ- ಸೆಪ್ಟಂಬರ್ ಶ್ಯಾಮಲಾ
2020 ಸೆಪ್ಟಂಬರ್-2022 ಜನವರಿ ಪಿ.ಪಾಲಯ್ಯ
2022 ಜನವರಿ- ಏಪ್ರಿಲ್ ಟಿ. ಲೀಲಾವತಿ
2022 ಏಪ್ರಿಲ್ ತಿಂಗಳಲ್ಲಿ ಒಂದು ದಿನ ಸಿ. ಚಂದ್ರಪ್ಪ
2022 ಏಪ್ರಿಲ್- ಜುಲೈ ಟಿ.ಲೀಲಾವತಿ
2022 ಜುಲೈನಲ್ಲಿ ಎಂಟು ದಿನ ಎ.ವಾಸಿಂ
2022 ಜುಲೈ- ಆ.4 ಟಿ.ಲೀಲಾವತಿ
2022 ಆ.4- 2023 ಫೆಬ್ರವರಿ ಸಿ.ಚಂದ್ರಪ್ಪ
2023 ಫೆಬ್ರವರಿ- ಜುಲೈ ರಾಮಕೃಷ್ಣ ಸಿದ್ದನಕೊಳ
2023 ಜುಲೈ-ಆಗಸ್ಟ್ 3ರ ಟಿ.ಲೀಲಾವತಿ.
ಖಾಲಿ ಇದ್ದ ಪೌರಾಯುಕ್ತ ಸ್ಥಾನಕ್ಕೆ ಮತ್ತೆ ಸಿ.ಚಂದ್ರಪ್ಪ ನಿಯೋಜನೆಗೊಂಡಿದ್ದಾರೆ.
ಏನೇನು ಸೌಲಭ್ಯ ಕಲ್ಪಿಸಬೇಕು?: ಜನಸಂಖ್ಯೆಯಲ್ಲಿ ವಿಸ್ತಾರವಾಗಿ ಬೆಳೆಯುತ್ತಿರುವ ಚಳ್ಳಕೆರೆ ನಗರವನ್ನು 31 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಸ್ವಚ್ಛತೆ ಮತ್ತು ಚರಂಡಿ ನಿರ್ವಹಣೆಗೆ ಈಗಾಗಲೇ 184 ಕೋಟಿ ರೂ. ವೆಚ್ಚದ ಯುಜಿಡಿ ಯೋಜನೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.