ಇಮ್ತಿಯಾಜ್ ಕುಟುಂಬಕ್ಕೆ ಕ್ರಿಸ್‌ಮಸ್ ಉಡುಗೊರೆ, ಸ್ನೇಹಾಲಯ ತಂಡದಿಂದ ಆರೈಕೆ, ಮನೆಗೆ ಮರಳಿದ ಯುವಕ

seva
ಬಳ್ಳಾರಿಯ ಇಮ್ತಿಯಾಜ್‌ರನ್ನು ಕುಟುಂಬ ಸದಸ್ಯರು ಸ್ನೇಹಾಲಯಕ್ಕೆ ಆಗಮಿಸಿ ಮರಳಿ ತವರೂರಿಗೆ ಕರೆಸಿಕೊಂಡರು. ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ, ಇಮ್ತಿಯಾಜ್ ಕುಟುಂಬಸ್ಥರು ಜತೆಗಿದ್ದರು.
Published on

ಮಂಗಳೂರು: ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಬೀದಿ ಬದಿಯಲ್ಲಿ ಎರಡು ವರ್ಷದ ಹಿಂದೆ ಸಿಕ್ಕಿದ್ದ ಯುವಕನಿಗೆ ಚಿಕಿತ್ಸೆ ಒದಗಿಸಿ, ಆರೈಕೆ ಮಾಡಿ, ಗುಣಮುಖರಾಗುವಂತೆ ಮಾಡಿದ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಮರಳಿ ಮನೆ ಸೇರುವಂತೆ ಮಾಡಿದೆ.

2021ರ ಸೆಪ್ಟೆಂಬರ್ 15ರಂದು ಇಮ್ತಿಯಾಜ್(27) ಎಂಬಾತನನ್ನು ಸ್ನೇಹಾಲಯ ತಂಡ ಮಂಜೇಶ್ವರದ ಬೀದಿ ಬದಿಯಿಂದ ರಕ್ಷಿಸಿ ಆತನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿತ್ತು. ದಾಖಲಾತಿಯ ಸಂದರ್ಭ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅನಾರೋಗ್ಯದ ಲಕ್ಷಣಗಳು ಕಂಡುಬಂದಿದ್ದವು. ಸ್ನೇಹಾಲಯದ ತಂಡ ಯುವಕನಿಗೆ ಸಮರ್ಪಕ ಆರೈಕೆ ಮತ್ತು ಚಿಕಿತ್ಸೆ ಒದಗಿಸಿತು. ಈ ಮಧ್ಯೆ ಮುಂಬೈನ ಶ್ರದ್ಧಾ ಫೌಂಡೇಶನ್‌ನ ಬೆಂಬಲದೊಂದಿಗೆ, ಆತನ ಕುಟುಂಬವನ್ನೂ ಪತ್ತೆಹಚ್ಚಲಾಯಿತು.

ಡಿ.23ರಂದು ಬಳ್ಳಾರಿ ಮೂಲದ ಇಮ್ತಿಯಾಜ್ ಕುಟುಂಬ, ಮಗನನ್ನು ಮರಳಿ ಪಡೆಯಲು ಸ್ನೇಹಾಲಯಕ್ಕೆ ಆಗಮಿಸಿತು. ಏಳು ವರ್ಷಗಳ ನಂತರ ಆತನನ್ನು ನೋಡಿದ ಪಾಲಕರು, ಸಹೋದರಿ ಮತ್ತು ಚಿಕ್ಕಮ್ಮ ಆನಂದಭಾಷ್ಪ ಸುರಿಸಿದರು. ಕುಟುಂಬದ ಪುನರ್ಮಿಲನದ ಸವಿಯನ್ನು ಕ್ರಿಸ್‌ಮಸ್‌ನ ಸ್ಮರಣೀಯ ಉಡುಗೊರೆಯಾಗಿ ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ವತಿಯಿಂದ ಆ ಕುಟುಂಬಕ್ಕೆ ನೀಡಲಾಯಿತು.

ಪೂರ್ಣ ಗುಣಮುಖರಾದ ಇಮ್ತಿಯಾಜ್‌ರನ್ನು ಕುಟುಂಬಕ್ಕೆ ಮರಳಿಸಿದ್ದಕ್ಕಾಗಿ ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯ ತಂಡಕ್ಕೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net