ಚಿಂತಾಮಣಿಯಲ್ಲಿ ಎರಡು ಮಕ್ಕಳ ತಂದೆ ಜತೆ 16 ವರ್ಷದ ಬಾಲೆಗೆ ಮದ್ವೆ: 3 ತಿಂಗಳ ಬಳಿಕ ಸಿಕ್ಕಿಬಿದ್ರು

Weddinge 13 April 20
Published on

ಚಿಂತಾಮಣಿ: ಎರಡು ಮಕ್ಕಳ ತಂದೆಯ ಜತೆ 16 ವರ್ಷದ ಬಾಲಕಿಗೆ ಮದುವೆ ಮಾಡಿರುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಪಾಲಕರು ಹಾಗೂ ಮದ್ವೆ ಗಂಡನ್ನು ಪೊಲೀಸರು ಬಂಧಿಸಿದ್ದಾರೆ.

ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ವ್ಯಾಪ್ತಿಯ ಬುರುಡುಗುಂಟೆ ಗ್ರಾಮದ ವ್ಯಕ್ತಿಯೊಬ್ಬನ ಜತೆ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬುಡ್ಗಜಂಗಮ ಗ್ರಾಮದ ಬಾಲಕಿಗೆ ಆಂಜನೇಯಸ್ವಾಮಿ ದೇವಾಲಯದಲ್ಲಿ 3 ತಿಂಗಳ ಹಿಂದೆ ಮದುವೆ ಮಾಡಲಾಗಿತ್ತು. ಬಾಲಕಿಯನ್ನು ಮದುವೆ ಆದ ವ್ಯಕ್ತಿಗೆ ಈಗಾಗಲೇ ಬೇರೊಂದು ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದು, ಪತ್ನಿ ಮೃತಪಟ್ಟಿದ್ದಾಳೆ.

ಹಲವು ದಿನಗಳಿಂದ ಶಾಲೆಗೆ ಬಾಲಕಿ ಗೈರಾಗಿದ್ದಳು. ಶಾಲೆಗೆ ಕಳುಹಿಸುವಂತೆ ಮುಖ್ಯಶಿಕ್ಷಕರು ಬಾಲಕಿಯ ಪಾಲಕರಿಗೆ ಸೂಚಿಸಿದ್ದರಾದರೂ ಕಳುಹಿಸಿರಲಿಲ್ಲ. ವಿಚಾರಿಸಲು ಶಿಕ್ಷಕರು ಗ್ರಾಮಕ್ಕೆ ಭೇಟಿ ನೀಡಿದಾಗ ಬಾಲ್ಯವಿವಾಹ ಬಹಿರಂಗವಾಗಿದೆ. ಈ ಬಗ್ಗೆ ಮುಖ್ಯಶಿಕ್ಷಕ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಬಾಲಕಿಯ ಪಾಲಕರು ಮತ್ತು ಮದ್ವೆ ಗಂಡನ್ನು ಪೊಲೀಸರು ಬಂಧಿಸಿದ್ದಾರೆ. ವರನ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಪ್ರಸ್ತುತ ಬಾಲಕಿಯನ್ನು ಸಾಂತ್ವನ ಕೇಂದ್ರದಲ್ಲಿರಿಸಲಾಗಿದ್ದು, ಮದ್ವೆ ಗಂಡು ಹಾಗೂ ಪಾಲಕರು ಶುಕ್ರವಾರ ಜೈಲು ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net