

ಹಾಸನ: ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರಕಲಗೂಡು ಪಟ್ಟಣದ ಕೊತ್ತಲು ಗಣಪತಿ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ಗಮನ ಸೆಳೆಯಿತು. ತಾಲೂಕಿನ ವಿವಿಧ ಶಾಲಾ, ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಬಣ್ಣ ಬಣ್ಣದ ಸೀರೆಯುಟ್ಟು ಹಣೆಗೆ ಕುಂಕುಮ ಬಳಿದುಕೊಂಡಿದ್ದ ವಿದ್ಯಾರ್ಥಿಗಳು, ನೃತ್ಯ, ಸಂಗೀತ, ಸಮೂಹ ಗೀತೆ ಮತ್ತಿತರ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಗಮನ ಸೆಳೆದರು.
ಮೊದಲಿಗೆ ಭಾರತ ಮಾತೆ, ಒನಕೆ ಓಬವ್ವ, ಸೈನಿಕ, ವೈದ್ಯ, ವಕೀಲ, ರೈತ ಮಹಿಳೆ, ಶಿಕ್ಷಕಿ ಮತ್ತಿತರೆ ವೇಷಭೂಷಣದೊಂದಿಗೆ ವೇದಿಕೆಗೆ ಆಗಮಿಸಿದ ಜಿಜಿಜೆಸಿ ಪಿಯು ವಿದ್ಯಾರ್ಥಿನಿಯರು ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಸ್ಥಾನ ಮಾನ ಕುರಿತು ಅನವರಣಗೊಳಿಸಿದರು. ಬಳಿಕ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಭಾರ್ಗವಿ ತಂಡ ಭಕ್ತಿಗೀತೆ ಪ್ರಸ್ತುತಪಡಿಸಿದರೆ, ಜಿಜಿಜೆಸಿ ಕಾಲೇಜಿನ ಮೋಹಿತ ಭಕ್ತಿಗೀತೆಯನ್ನು ಸುಮಧುರವಾಗಿ ಹಾಡಿ ಜನ ಮೆಚ್ಚುಗೆ ಗಳಿಸಿದರು.
ಹಾಗೆಯೇ ಕೋಟೆಯ ಜಿಎಚ್ ಪಿಎಸ್ ಶಾಲೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರೆ, ಮರಿಯನಗರದ ಶಾಲಾ ವಿದ್ಯಾರ್ಥಿಗಳು ಯಕ್ಷಗಾನ ಗೀತೆಗೆ ಹೆಜ್ಜೆ ಹಾಕಿದರು. ಹಾಸನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ಜನ ಮೆಚ್ಚಿಗೆ ಪಡೆದರು.
ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹ ನಿರ್ದೇಶಕ ರವಿಕುಮಾರ್, ದಸರಾ ಆಚರಣಾ ಸಮಿತಿ ಕಾರ್ಯದರ್ಶಿ ರವಿಕುಮಾರ್, ಸದಸ್ಯರಾದ ಬಾಲರಾಜ್, ರಘು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಾಲರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸರಸ್ವತಿ, ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಪದ್ಮ ಮತ್ತಿತರರು ಉಪಸ್ಥಿತರಿದ್ದರು.